ಬಂಟ್ವಾಳ, ಜೂ 26 (Daijiworld News/MSP): ಕೊರೊನಾ ಸಾಂಕ್ರಮಿಕ ರೋಗದ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮುನ್ನೆಚ್ಚರಿಕೆಯೊಂದಿಗೆ ಮೊದಲ ದಿನ ಯಶಸ್ವಿಯಾಗಿ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಈ ನಡುವೆ ಬಂಟ್ವಾಳದ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬ ಎಲ್ಲರಿಗೂ ಸ್ಪೂರ್ತಿಯಾಗಿ ರಾಜ್ಯ ಶಿಕ್ಷಣ ಸಚಿವರ ಮನಗೆದ್ದಿದ್ದಾನೆ.
ಅದೆಷ್ಟೋ ಎಡರುತೊಡರುಗಳಿದ್ದರೂ, ಎಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕೆಂಬ ಉತ್ತಾಹದಿಂದ ಕೌಶಿಕ್ ಎನ್ನುವ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ನೆಲದ ಮೇಲೆ ಕುಳಿತು ಉತ್ತರ ಬರೆದಿದ್ದು, ತನ್ನ ದೈಹಿಕ ನ್ಯೂನತೆ ಮೀರಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ಈ ವಿಚಾರವನ್ನು ಖುದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿದ್ದು " ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ" ಎಂದು ವಿದ್ಯಾರ್ಥಿಯನ್ನು ಹೊಗಳಿದ್ದಾರೆ.
ಬಹುಮುಖ ಪ್ರತಿಭೆ ಕೌಶಿಕ್ :
ಬಂಟ್ವಾಳ ದ ಕಂಚಿಕಾರ ಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ಎರಡನೇ ಮಗ ಕೌಶಿಕ್. ಈತ ಹುಟ್ಟಿನಿಂದಲೇ ಎರಡು ಕೈಗಳಿಲ್ಲದೆ ಬದುಕಿಗೆ ಅಡಿಯಿಟ್ಟವನು. ಆದರೂ ಯಾವುದೇ ಅಂಜಿಕೆಯಿಲ್ಲದೆ ಯಾರಿಗೂ ಕಡಿಮೆ ಯಿಲ್ಲದ ರೀತಿ ಯಲ್ಲಿ ಈತ ಪ್ರತಿಭಾನ್ವಿತ ಬಾಲಕ.
ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿ. ಪಾಠದ ಜೊತೆಯ ಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಾಲಕ ಎತ್ತಿದ ಕೈ. ಈತ ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಬಿಸಿದ ಕಾರಣ ಇಷ್ಟು ಎರಡು ಕೈಗಳಿಲ್ಲದ ಕೌಶಿಕ್ ನಿಗೆ ಆತನ ಕಾಲುಗಳೇ ಕೈಯಾಗಿತ್ತು. ನಿನ್ನೆ ಆರಂಭವಾದ ಎಸ್.ಎಸ್.ಎಲ್.ಸಿ.ಪರೀಕ್ಷೆ ಯನ್ನು ಕಾಲಿನಿಂದ ಬರೆದು ಮೆಚ್ಚುಗೆ ಪಡೆದ ವಿದ್ಯಾರ್ಥಿ ಯಾಗಿದ್ದಾನೆ. ಓದಿನ ಜೊತೆ ಕೌಶಿಕ್ ಡ್ಯಾನ್ಸ್ , ಡ್ರಾಯಿಂಗ್, ಈಜು, ಕ್ರಿಕೆಟ್, ಹೀಗೆ ಎಲ್ಲ ಆಟದಲ್ಲಿಯೂ ಎತ್ತಿದ ಕೈ. ಈತನಿಗೆ ಆಟೋಟಗಳಲ್ಲಿ ಅನೇಕ ಬಹುಮಾನಗಳು ದೊರೆತಿವೆ.