ಉಡುಪಿ, ಜೂ. 26 (DaijiworldNews/MB) : ಅಕ್ರಮ ಮರಳು ಸಾಗಾಟದ ವಿಷಯದಲ್ಲಿ ಗುರುವಾರ ಯುವ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಟಿ ನಡೆಸಿ ಜನರಿಗೆ ತಪ್ಪು ಅಭಿಪ್ರಾಯ ಬಿಂಬಿಸುವ ಕೆಲಸ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರ ಸಭೆ ವತಿಯಿಂದ ಟೆಂಡರ್ ಕರೆದಿದ್ದು ಆ ಟೆಂಡರ್ ಮಾರ್ಚ್ ಮೊದಲ ವಾರದಲ್ಲಿ ಮುಗಿದಿದೆ. ಆ ಟೆಂಡರ್ದಾರರಿಗೆ ಆಯುಕ್ತರು ಟೆಂಡರ್ ಅವಧಿ ಮುಗಿದಿರುವ ಬಗ್ಗೆ ನೋಟಿಸ್ ನೀಡಿದ್ದಾರೆ. ಅಲ್ಲಿಗೆ ಸರ್ಕಾರ ಹಾಗೂ ಕಾಂಟ್ರಾಕ್ಟರ್ ಸಂಬಂಧ ಮುಗಿದಿದೆ. ಲಾಕ್ಡೌನ್ ಸಂದರ್ಭದಲ್ಲಿ ಅವರು ಕಾನೂನು ಬಾಹಿರವಾಗಿ ಸ್ವರ್ಣ ನದಿಯಲ್ಲಿ ಮರಳನ್ನು ಲೂಟಿ ಹೊಡೆಯುವ ಕೆಲಸವನ್ನು ಮಾಡಿದ್ದು ಅವರ ವಿರುದ್ಧ ಜಿಲ್ಲಾಡಳಿತ ಈಗಾಗಲೇ ಕ್ರಮ ಜರುಗಿಸಿದೆ ಎಂದು ತಿಳಿಸಿದ್ದಾರೆ.
ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡಿದವರ ವಿರುದ್ಧವಾಗಿ ಈಗಾಗಲೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಐದು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರವು ಕೂಡಾ ಕಳ್ಳತನದ ಪ್ರಕರಣ ದಾಖಲು ಮಾಡಲಾಗಿದೆ. ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳಲಾಗಿದೆ. ಆ ಬಳಿಕ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಅಕ್ರಮ ಮರಳುಗಾರಿಕೆಯ ವಿರುದ್ಧ ಲೋಕಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಕೊರೊನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮರಳು ಸಾಗಾಟದ ಬಗ್ಗೆ ಕಾದು ಕೂರಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಯಾಗಿ ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.