ಮಂಗಳೂರು, ಜೂ 26 (Daijiworld News/MSP): ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಬೀದಿನಾಯಿಗಳ ಹಿಂಡು ದಾಳಿ ಮಾಡಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಬಾರ್ಕಿಂಗ್ ಡೀರ್ (ಕಾಡುಕುರಿ) ಮಾರಣಹೋಮ ನಡೆದಿದೆ.
ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ಉದ್ಯಾನವನದ ಬೇಲಿ ಹಾರಿ ಕಾಡುಕುರಿ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಕಾಡುಕುರಿ ಸತ್ತಿದ್ದು, ಇನ್ನು 5ಕ್ಕೂ ಹೆಚ್ಚಿನ ಕಾಡುಕುರಿ ಗಂಭೀರವಾಗಿ ಗಾಯಗೊಂಡಿದೆ.
ಬೀದಿ ನಾಯಿಗಳ ದಾಳಿಗೆ ಸಿಲುಕಿ ಇಷ್ಟೊಂದು ಪ್ರಮಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮದಲ್ಲೇ ಬಾರ್ಕಿಂಗ್ ಡೀರ್ ಗಳಿಗೆ ರಕ್ಷಣೆ ಇಲ್ಲವಾಗಿದ್ದು ಜಿಂಕೆಗಳ ಮಾರಣಹೋಮಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಲಿಕುಳ ಜೈವಿಕ ಉದ್ಯಾನ ವನದ ನಿರ್ದೇಶಕ ಜಯಪ್ರಕಾಶ್ , ನಾವು ಈ ಹಿಂದೆಯೆ ಬಾರ್ಕಿಂಗ್ ಡೀರ್ ಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು. ಆದ್ರೆ ನಿನ್ನೆ ರಾತ್ರಿ ಬೀದಿನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.