ಬೆಂಗಳೂರು, ಏ 05: ಕಾವೇರಿ ನಿರ್ವಹಣಾ ಮಂಡಳಿ ರಚಿಸಿಬಾರದೆಂದು ಏಪ್ರಿಲ್ 12 ಗುರುವಾರ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಅತ್ತಿಬೆಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ , ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡಿನಲ್ಲಿ ಭಾರಿ ಹೋರಾಟ ನಡೆಯುತ್ತಿರುವುದನ್ನು ವಿರೋಧಿಸಿದ ಅವರು ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಬಾರದು. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಸುವುದಾಗಿ ಹೇಳಿದರು. ತಮಿಳುನಾಡು ಒತ್ತಡದ ನಾಟಕ ಆಡುತ್ತಿದೆ ನಿರ್ವಹಣಾ ಮಂಡಳಿ ರಚಿಸಿದರೆ ಕನ್ನಡಿಗರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತೆ ಅಂತ ಪ್ರಧಾನಿ ಮೋದಿಗೆ ವಾಟಾಳ್ ಎಚ್ಚರಿಕೆ ನೀಡಿ, ತಮಿಳುನಾಡಿನ ಒತ್ತಾಯಕ್ಕೆ ಮಣಿಯದಂತೆ ಇದೇ ಸಂದರ್ಭ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ಇನ್ಮುಂದೆ ಕರ್ನಾಟಕದಲ್ಲಿ ರಜನಿಕಾಂತ್ ಹಾಗೂ ಕಮಲಹಾಸನ್ ಅವರ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಈ ನಟರೂ ಕಾವೇರಿ ನಿರ್ವಹಣಾ ಮಂಡಳಿ ಪರವಾಗಿ ಇದ್ದಾರೆ, ಹೀಗಾಗಿ ಅವರ ಚಿತ್ರಗಳಿಗೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂದರು.