ಮಂಗಳೂರು, ಜೂ 26 (Daijiworld News/MSP): ಬಿ.ಸಿ. ರೋಡ್ - ಜಕ್ರಿಬೆಟ್ಟು ಹೆದ್ದಾರಿಯಲ್ಲಿ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರ್ಣಗೊಳಿಸಲೆಂದು 23 ದಿನಗಳ ಕಾಲ ಅಂದರೆ ಇಂದಿನಿಂದ ಜು.28 ರ ವರೆಗೆ ಎಲ್ಲಾ ವಿಧದ ವಾಹನ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಸಂಚಾರ ನಿಷೇಧದ ಹಿನ್ನಲೆಯಲ್ಲಿ ಮಂಗಳೂರು - ಪುಂಜಾಲಕಟ್ಟೆ ಕಡೆ ಓಡಾಡುವ ಲಘು ವಾಹನಗಳಾದ ಕಾರು ಜೀಪು , ಮಿನಿ ವ್ಯಾನ್ ದ್ವಿಚಕ್ರವಾಹನ , ಅಂಬ್ಯುಲೆನ್ಸ್ ವಾಹನಗಳು ಬದಲಿ ರಸ್ತೆಯಾದ ಮಂಗಳೂರು, ಬಿ.ಸಿ ರೋಡು, ಬಂಟ್ವಾಳ ಪೇಟೆ - ಜಕ್ರಿಬೆಟ್ಟು ಬಳಸುವಂತೆ ಹಾಗೂ ಮೂಡುಬಿದ್ರೆ ಬಂಟ್ವಾಳ ಬಿ.ಸಿ ರೋಡ್ ಕಡೆಗೆ ಸಂಚರಿಸುವ ವಾಹನ ಬದಲಿ ರಸ್ತೆಯಾದ ಮೂಡುಬಿದ್ರೆ ಬಂಟ್ವಾಳ ಜಂಕ್ಷನ್ ರಾ. ಹೆ -234 ಮುಖಾಂತರ ಜಕ್ರಿಬೆಟ್ಟು - ಬಂಟ್ವಾಳ ಪೇಟೆ - ಬಿ.ಸಿ ರೋಡ್ ಕಡೆಗೆ ಚಲಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ.
ಇನ್ನು ಮಂಗಳೂರು - ಗುರುವಾಯನಕೆರೆ ಕಡೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ದಿನನಿತ್ಯ ಸಂಚರಿಸುವ ಸಾರ್ವಜನಿಕ ಬಸ್ಸುಗಳಿಗೆ ರಾಷ್ಟ್ರೀಯ ಹೆದ್ದಾರಿ 234 ಬಳಸುವಂತೆ, ಅಂದರೆ ಮಂಗಳೂರು - ಬಿ.ಸಿ ರೋಡ್ ಉಪ್ಪಿನಂಗಡಿ ಮುಖಾಂತರ ಕರಾಯ ಕಲ್ಲೇರಿ ಗುರುವಾಯನಕೆರೆ ಬದಲಿ ಮಾರ್ಗ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿಗೆ ಬರುವ ಬಸ್ಸುಗಳು ಗುರುವಾಯನಕೆರೆ ಮುಖಾಂತರ ಕಲ್ಲೇರಿ - ಕರಾಯ ಉಪ್ಪಿನಂಗಡಿ ಮಾಣಿ ಬಿ.ಸಿ ರೋಡ್ ಮಂಗಳೂರು ಬಳಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇದಲ್ಲದೆ ಟ್ಯಾಂಕರ್ಸ್ , ಶಿಪ್ ಕಾರ್ಗೋ ಕಂಟೆನರ್ಸ್ , ಹೆವಿ ಕಮರ್ಷಿಯಲ್ ವೆಹಿಕಲ್ ಮಲ್ಟಿ ಎಕ್ಸೆಲ್ ಟ್ರಕ್ಸ್, ರಾಜಹಂಸ ಮುಂತಾದ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳಿಸಲು ಸಮಯಾವಕಾಶ ಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ. ಜಿಲ್ಲಾಧಿಕಾರಿಗೆ ಸಂಚಾರ ನಿಷೇಧಿಸುವಂತೆ ಮನವಿ ಸಲ್ಲಿಸಿ ಪತ್ರ ಸಲ್ಲಿಸಿತ್ತು.