ಮಂಗಳೂರು, ಜೂ 26 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ 33 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬರೋಬ್ಬರಿ 10 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿರುವುದು ಹೊಸ ತಲೆನೋವಿಗೆ ಕಾರಣವಾಗಿದೆ.
ಇನ್ನು ಶುಕ್ರವಾರ ಪಾಸಿಟಿವ್ ಬಂದವರ ಪೈಕಿ ಐವರು ಸೌದಿಯಿಂಡ ಮರಳಿದವರಾಗಿದ್ದಾರೆ. 6 ಮಂದಿ ಕತಾರ್ ಹಾಗೂ ನಾಲ್ವರು ದಮಾಮ್ ನಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ. ಇಂದು ಪತ್ತೆಯಾದ ಪ್ರಕರಣಗಳ ಪೈಕಿ ನಾಲ್ಕು ಐಎಲ್ ಐ ಪ್ರಕರಣಗಳಾಗಿದ್ದು, 2 ಎಸ್ ಎ ಎ ಆರ್ ಐ ಪ್ರಕರಣವೆಂದು ಗುರುತಿಸಲಾಗಿದೆ. ಇನ್ನು ಉಡುಪಿ ಪ್ರಯಾಣ ಹಿಸ್ಟರಿ ಹೊಂದಿರುವ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಈ ನಡುವೆ ಟ್ರಾವೆಲ್ ಹಿಸ್ಟರಿ ಇಲ್ಲದ ಒಂದು ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯವನ್ನು ನಡೆಸುತ್ತಿದೆ.
ಇನ್ನು ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 303 ಮಂದಿಯ ವರದಿ ಲಭ್ಯವಾಗಿದ್ದು, ಈ ಪೈಕಿ 270 ಮಂದಿಯ ವರದಿ ನೆಗೆಟಿವ್ ಆಗಿದೆ. 202 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ.
ಸದ್ಯ ಜಿಲ್ಲೆಯಲ್ಲಿ 139 ಮಂದಿ ಕೊರೊನಾ ಸೋಂಕಿನಿಂದಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 517 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 378 ಮಂದಿ ಇಲ್ಲಿಯ ತನಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶುಕ್ರವಾರ ಒಂದೇ ದಿನ 34 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಚಿಕಿತ್ಸೆ ಫಲಕಾರಿಯಾಗದೆ 10 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.