ಉಡುಪಿ, ಜೂ 26 (DaijiworldNews/SM): ಶುಕ್ರವಾರದಂದು ಮತ್ತೆ 9 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಎಂಟು ಮಂದಿ ಪುರುಷರಾಗಿದ್ದು, ಓರ್ವ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕಿತರಲ್ಲಿ ಮೂವರು ಬೆಂಗಳೂರಿನಿಂದ ಪ್ರಯಾಣಿಸಿದವರಾಗಿದ್ದಾರೆ. ಇಬ್ಬರು ಮಹಾರಾಷ್ಟ್ರದಿಂದ ಮರಳಿದ್ದು, ಮಸ್ಕತ್, ಕತಾರ್, ಕೇರಳದಿಂದ ಮರಳಿದ ತಲಾ ಓರ್ವನಲ್ಲಿ ಸೋಂಕು ಕಂಡುಬಂದಿದೆ. ಈ ನಡುವೆ ಮತ್ತೊಬ್ಬರ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಇಲ್ಲಿಯ ತನಕ 4881 ಮಂದಿ 28 ದಿನಗಳ ತಮ್ಮ ಕ್ವಾರಂಟೈನ್ ಪೂರೈಸಿದ್ದಾರೆ. ಅಲ್ಲದೆ, 4871 ಮಂದಿ 14 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಶುಕ್ರವಾರದಂದು 12 ಮಂದಿ ಐಸೋಲೇಷನ್ ವಾರ್ಡ್ ಗೆ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ 69 ಮಂದಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶುಕ್ರವಾರದಂದು 17 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಪತ್ತೆಯಾಗಿರುವ 1125 ಸೋಂಕಿತರ ಪೈಕಿ 1037 ಮಂದಿ ಇಲ್ಲಿಯ ತನಕ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. 86 ಮಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ ಇಬ್ಬರು ಸೋಂಕಿನಿಂದಾಗಿ ಮೃತಪಟಿದ್ದಾರೆ.