ಉಳ್ಳಾಲ, ಜೂ 26 (DaijiworldNews/SM): ಉಳ್ಳಾಲ ಭಾಗದ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಪೈಕಿ ಒಬ್ಬರು ಪೊಲೀಸ್ ಅಧಿಕಾರಿ ಮತ್ತು ಇನ್ನೋರ್ವ 25ರ ಹರೆಯದ ಯುವಕನಾಗಿದ್ದಾನೆ.
ಸೌದಿಯಿಂದ ಬಂದಿದ್ದ ಇಬ್ಬರು ಗೆಳೆಯರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದ್ದ ಉಳ್ಳಾಲದ 25ರ ಹರೆಯದ ಯುವಕನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ತಾನು ಭೇಟಿ ಮಾಡಿದ್ದ ಇಬ್ಬರು ಗೆಳೆಯರಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ, ಪ್ರಾಥಮಿಕ ಸಂಪರ್ಕ ಹೊಂದಿದ್ದ ಉಳ್ಳಾಲದ ಯುವಕನನ್ನು ಆರು ದಿನಗಳಿಂದ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇದೀಗ ಯುವಕನಲ್ಲಿ ಸೋಂಕು ದೃಢವಾಗಿರುವುದರಿಂದ ತಾನು ವಾಸವಿದ್ದ ಫ್ಲ್ಯಾಟ್ ನಲ್ಲಿರುವ ಆರು ಮನೆಗಳನ್ನು ಸೀಲ್ಡೌನ್ ನಡೆಸಿ 35 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಇನ್ನು ಎಎಸ್ಐ ವಾಸವಿದ್ದ ವಸತಿ ಸಂಕೀರ್ಣದ ಎಂಟು ಮನೆಗಳ 24 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
25 ಮಂದಿಯ ಗಂಟಲು ದ್ರವ ಪರೀಕ್ಷೆ:
ಉಳ್ಳಾಲ ಆಝಾದ್ ನಗರದಲ್ಲಿ ಕೊರೊನಾದಿಂದ ಮೃತ ಮಹಿಳೆಯ ಮನೆಯ ಸಮೀಪದ ಸುಮಾರು 25 ಮಂದಿಯ ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಶನಿವಾರವೂ ಈ ಭಾಗದ ಹಲವರ ಪರೀಕ್ಷೆ ನಡೆಯಲಿದೆ.
ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಸಾಮುದಾಯಿಕವಾಗಿ ಕೊರೊನಾ ಹರಡಿರುವುದರಿಂದ ನಗರಸಭೆ ವ್ಯಾಪ್ತಿಯ ಉಳ್ಳಾಲ ಕೋಡಿ, ಕೋಟೆಪುರ , ಉಳ್ಳಾಲ ಜಂಕ್ಷನ್, ಮೊಗವೀರ ಪಟ್ಣ, ಸಮ್ಮರ್ ಸ್ಯಾಂಡ್, ಅಬ್ಬಕ್ಕ ಸರ್ಕಲ್, ಮುಕ್ಕಚೇರಿ, ಮಾಸ್ತಿಕಟ್ಟೆ, ಮೇಲಂಗಡಿ, ದರ್ಗಾ ರಸ್ತೆ, ಉಳ್ಳಾಲಬೈಲು ಮುಖ್ಯರಸ್ತೆ, ತೊಕ್ಕೊಟ್ಟು ಒಳಪೇಟೆ, ಮಂಚಿಲ,ಅಳೇಕಲ, ತೊಕ್ಕೊಟ್ಟು ಜಂಕ್ಷನ್, ತೊಕ್ಕೊಟ್ಟು ಬಸ್ಸು ನಿಲ್ದಾಣ, ಮಾರ್ಗತಲೆ ಕಲ್ಲಾಪು, ಶಿವಾಜಿನಗರ, ಪಂಡಿತ್ಹೌಸ್, ಕುತ್ತಾರು ಸ್ಯಾನಿಟೈಸ್ ಮಾಡಬೇಕಾಗಿರುವುದರಿಂದ ಎಲ್ಲಾ ಅಂಗಡಿ ಮಾಲಕರು ಮಧ್ಯಾಹ್ನ 1.00ಗಂಟೆಯ ತನಕ ಅಂಗಡಿಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲು ಸಹಕರಿಸಬೇಕು ಎಂದು ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.