ಮಂಗಳೂರು, ಜೂ 27 (Daijiworld News/MSP): ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರವೇ ಒಳರೋಗಿ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ಗೆ ನಿಗದಿತ ಆಸ್ಪತ್ರೆಯಾಗಿ ಪರಿಗಣಿಸಿದ್ದರಿಂದ ಇತರೆ ಸೇವೆಗಳನ್ನು ನಿಲ್ಲಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ವೆನ್ಲಾಕ್ನಲ್ಲಿ ಹೊರರೋಗಿ ಸೇವೆ ಆರಂಭಿಸಲಾಗಿದೆ.
ಪ್ರತೀದಿನ 250ರಷ್ಟು ಮಂದಿ ಹೊರರೋಗಿಗಳು ಈಗ ಬರುತ್ತಿದ್ದಾರೆ. ಶೀಘ್ರವೇ ಕನಿಷ್ಠ 100 ಒಳರೋಗಿಗಳ ಸೇವೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ 142 ಕೋರೋನಾ ಸಕ್ರಿಯ ಪ್ರಕರಣಗಳಿವೆ. 370 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 10 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಪರೀಕ್ಷೆಗೆ ಜಿಲ್ಲೆಯಲ್ಲಿ 4 ಖಾಸಗಿ ಹಾಗೂ 1 ಸರಕಾರಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.