ಉಡುಪಿ, ಜೂ. 27 (DaijiworldNews/MB) : ಅಂಗ ನ್ಯೂನತೆಯಿದ್ದರೂ, ಒಂದು ಕೈಯಲ್ಲೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಬಾಲಕಿ ಸಿಂಧೂರಿ 15 ಮಾಸ್ಕ್ ತಯಾರಿಸಿ ಬಾಲಕಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಉಡುಪಿಯ ಕಲ್ಯಾಣಪುರದ ನಿವಾಸಿಗಳಾದ ಸುಧೀರ್ ಮತ್ತು ರೇಣುಕಾ ದಂಪತಿಯ ಪುತ್ರಿ ಸಿಂಧೂರಿ ಕಲ್ಯಾಣಪುರದ ಮೌಂಟ್ ರೊಸರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದು ಸ್ಕೌಟ್ಸ್ ಆಂಡ್ ಗೈಡ್ನಲ್ಲಿ ಬುಲ್ ಬುಲ್ ಆಗಿದ್ದಾರೆ. ಎಡಗೈ ಬೆಳವಣಿಗೆ ಕಳೆದುಕೊಂಡಿರುವ ಸಿಂಧೂರಿ ಒಂದು ಕೈಯಲ್ಲೇ ಮಾಸ್ಕ್ ತಯಾರಿಸಿ ಕೊರೊನಾ ನಿಯಂತ್ರಣದಲ್ಲಿ ಭಾಗಿಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಶಹಬಾಷ್ ಎಂದಿದ್ದಾರೆ. ಶಾಸಕ ರಘುಪತಿ ಭಟ್ ಸಿಂಧೂರಿ ಮನೆಗ ಭೇಟಿ ನೀಡಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಮೌಂಟ್ ರೆಸರಿಯೊ ಶಾಲೆಯ ಅಧ್ಯಾಪಕರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ಮಕ್ಕಳಿಗೆ ಮಾಸ್ಕ್ ತಯಾರಿಸಲು ಸೂಚಿಸಿದ್ದಾರೆ. ಆದರೆ, ತನ್ನ ಅಂಗನ್ಯೂನತೆ ಲೆಕ್ಕಿಸದೆ ಸಿಂಧೂರಿ ಕೂಡ ಮಾಸ್ಕ್ ಹೊಲಿದು ಶಾಲೆಗೆ ನೀಡಿದ್ದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.