ಪುಂಜಾಲಕಟ್ಟೆ, ಏ 05: ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ವಾಮದಪದವು ಸರಕಾರಿ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿ, ಸಕಲೇಶಪುರದ ಕರಗೂರು ನಿವಾಸಿ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡವರು. ಕಾಲೇಜು ಬಿಟ್ಟು ವಿದ್ಯಾರ್ಥಿ ನಿಲಯಕ್ಕೆ ಬಂದು ಬಟ್ಟೆ ಒಣಗಿಸಲು ಬಳಸುವ ನೈಲಾನ್ ಹಗ್ಗದಿಂದ ಕೊಠಡಿಯ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ. ಮಧ್ಯಾಹ್ನ ಇತರ ವಿದ್ಯಾರ್ಥಿ ಗಳು ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ಮನೆ ಮಂದಿ ಬಂದ ಬಳಿಕ ಮೃತ ದೇಹವನ್ನು ಇಳಿಸಲಾಗಿದೆ. ಮೃತನ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಳೆದ 5 ವರ್ಷಗಳಿಂದ ವಿದ್ಯಾರ್ಥಿ ನಿಲಯದ ಮೂಲಕ ವ್ಯಾಸಂಗ ನಡೆಸುತ್ತಿದ್ದ. ಕಡಿಮೆ ಅಂಕ ಪಡೆದಿರುವುದಕ್ಕೆ ಆತ್ಮಹತ್ಯೆ ಗೈದಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.