ಬೆಳ್ತಂಗಡಿ,ಜೂ 27 (Daijiworld News/MSP): ವ್ಯಕ್ತಿತ್ವಕ್ಕೆ ಬೆಲೆಕೊಟ್ಟು ಕಾರ್ಯಕರ್ತರನ್ನು ಬೆಳೆಸುವುದು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶನಿವಾರ ಭಾರತೀಯ ಜನತಾಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಉಜಿರೆಯಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೆ. ಪ್ರತಾಪ್ಸಿಂಹ ನಾಯಕ್ ಮತ್ತು ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಹರಿಕೃಷ್ಣ ಬಂಟ್ವಾಳ್ರವರಿಗೆ ನಡೆದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ವ್ಯಕ್ತಿ ನಿರ್ಮಾಣದೊಂದಿಗೆ ದೇಶಪ್ರೇಮವನ್ನು ಬೆಳೆಸುತ್ತಿದೆ. ಅದೇ ರೀತಿ ನಮ್ಮ ಪಕ್ಷವು ಮುಂದುವರಿಯುತ್ತಿದೆ. ಮನುಷ್ಯನ ವ್ಯಕ್ತಿತ್ವವನ್ನು ಪ್ರೀತಿಸುವುದು, ಕಾರ್ಯಕರ್ತರನ್ನು ಬೆಳೆಸುವುದು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಆದರೆ ಹಣದ ಕಾಳೆಲೆಯುವ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಇದು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಇಂತಹ ಪಕ್ಷಕ್ಕೆ ಅಂತಿಮ ಕಾಲ ಬಂದಿದೆ. ಇನ್ನು ಪ್ರತಾಪ್ಸಿಂಹರಂತಹ ದೇಶಪ್ರೇಮಿಯ ಮೂಲಕ ಭಾರತೀಯ ಜನತಾಪಾರ್ಟಿಯ ಶಕ್ತಿಯನ್ನು ಅಭಿನಂದಿಸುವ ಕಾರ್ಯ ದೇಶಕ್ಕೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟ ಗೌರವವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಾಪ್ಸಿಂಹ ನಾಯಕ್ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಸಿಕ್ಕಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ದೇಶಪ್ರೇಮವನ್ನು ಬೆಳೆಸುವ ಏಕೈಕ ಪಕ್ಷ ಭಾರತೀಯ ಜನತಾಪಾರ್ಟಿ. ಇಂದು ಬಿಜೆಪಿಯಲ್ಲಿ ದೊಡ್ಡ ಯುವಸೈನ್ಯ ಬೆಳೆದು ನಿಲ್ಲಬೇಕಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಪಸ್ಸಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಯುವಕರಲ್ಲಿ ದುಡಿಯುವ ಸಂಸ್ಕತಿಯನ್ನು ಬೆಳೆಸಬೇಕು ಆಗ ದೇಶದ ಅಭಿವೃದ್ಧಿ ಸಾಧ್ಯ. ಇದು ಭಾರತೀಯ ಜನತಾಪಾರ್ಟಿಯಿಂದ ಮಾತ್ರ ಸಾಧ್ಯ. ದೇಶವನ್ನು ಮತ, ಅಧಿಕಾರ, ದುಡ್ಡಿಗಾಗಿ ಕಾಂಗ್ರೇಸ್ ಪಕ್ಷ ಬಳಸಿಕೊಂಡರೆ, ಭಾರತೀಯ ಜನತಾಪಾರ್ಟಿ ದೇಶಪ್ರೇಮಕ್ಕಾಗಿ ಶ್ರಮಿಸುತ್ತಿದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಇಡೀ ವಿಶ್ವವೇ ಭಾರತದೆಡೆ ಮುಖ ಮಾಡುತ್ತಿರುವುದೇ ಸಾಕ್ಷಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ಧನ್, ಹಿರಿಯ ವಕೀಲರಾದ ನೇಮಿರಾಜ ಶೆಟ್ಟಿ, ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜಾ ಪ್ರಾಸ್ತಾಪಿಸಿದರು. ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ಸೀತರಾಮ ಬೆಳಾಲು ವಂದಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅಭಿನಂದಿತರ ಪರಿಚಯ ವಾಚಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಹಲವರು ಸೇರ್ಪಡೆಗೊಂಡರು.