ಉಳ್ಳಾಲ, ಜೂ. 27 (DaijiworldNews/MB) : ಉಳ್ಳಾಲದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲ್ಲಿದ್ದು ಕೆಲ ದಿನಗಳ ಹಿಂದೆ ಕೊರೊನಾ ದೃಢಪಟ್ಟಿದ್ದ ಮಹಿಳೆಯ ಮನೆಯ 12 ಜನರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಉಳ್ಳಾಲದ ಮಾಸ್ತಿಕಟ್ಟೆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಹಾಗೆಯೇ ಮತ್ತಿಬರು ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಉಳ್ಳಾಲದ ಮಹಿಳೆಗೆ ಕೊರೊನಾ ದೃಢಪಟ್ಟಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆಯ ಮನೆಯನ್ನು ಸೀಲ್ಡೌನ್ ಮಾಡಲಾಗಿದ್ದು ಇದೀಗ ಮಹಿಳೆಯ ಮನೆಯಲ್ಲಿ ವಾಸವಿದ್ದ 17 ಜನರ ಪೈಕಿ 12 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿಂದೆ ಮಹಿಳೆಯ ಮನೆಯ ಸಮೀಪದ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಹಾಗೆಯೇ ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿ ಓರ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಇನ್ನು ಉಳ್ಳಾಲದಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ರ್ಯಾಂಡಮ್ ಆಗಿ ಪರೀಕ್ಷೆ ನಡೆಸಲು ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆಯಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ನಿರ್ಧಾರ ಕೈಗೊಂಡಿದ್ದಾರೆ.
ಹಾಗೆಯೇ ಉಳ್ಳಾಲದ ಮೀನುಗಾರರು, ರಿಕ್ಷಾ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಸ್ಥರ ತಪಾಸಣೆ ನಡೆಸಲು ಕೂಡಾ ತೀರ್ಮಾನಿಸಲಾಗಿದೆ.