ಕುಂದಾಪುರ, ಏ 6: ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗುರುರಾಜ್ ಪೂಜಾರಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಇದೀಗ ಕರಾವಳಿ ಭಾಗದ ಈ ಯುವ ಪ್ರತಿಭೆ ಭಾರತಕ್ಕೆ ಪದಕ ತಂದಿರುವುದು ನಾಡಿನೆಲ್ಲೆಡೆ ಸಂಭ್ರಮ ಮೂಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಗುರುರಾಜ್ ಪೂಜಾರಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಮಾತ್ರವಲ್ಲ ಗುರುರಾಜ್ ಪೂಜಾರಿಗೆ ನೇರವಾಗಿ ಗ್ರೂಪ್ ಬಿ ಹುದ್ದೆ ದೊರಕುತ್ತದೆ. ರಾಜ್ಯ ಸರಕಾರದಿಂದ 25 ಲಕ್ಷ ನಗದು ನೀಡಲಾಗುವುದು. ಸರಕಾರದ ಆದೇಶದಂತೆ ಈ ಗೌರವ ನೀಡಲಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ವಂಡ್ಸೆಯ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿ ಪುತ್ರನಾದ ಗುರುರಾಜ್ ಅವರ ಸಾಧನೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21 ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗುರುರಾಜ್ ಪೂಜಾರಿ ಭಾರತಕ್ಕೆ ಮೊದಲ ಬೆಳ್ಳಿ ತಂದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವೇಯ್ಟ್ ಲಿಫ್ಟಿಂಗ್ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತದ ಪರ ಅವರು ಮೊದಲ ಪದಕ ಗೆದ್ದಂತಾಗಿದೆ. ಪುರುಷರ 56 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಒಟ್ಟು 249 ಕೆಜಿ ಭಾರ ಎತ್ತಿವ ಮೂಲಕ ಗುರುರಾಜ್ ಈ ಸಾಧನೆಯನ್ನು ಮಾಡಿದ್ದಾರೆ. ಈ ಹಿಂದೆ ಗುವಾಹಟಿಯಲ್ಲಿ ನಡೆದ 12 ನೇ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ 56 ಕೆಜಿ ವಿಭಾಗದ ವೇಯ್ಟ್ ಲಿಪ್ಟಿಂಗ್ ನಲ್ಲಿ ಭಾಗವಹಿಸಿ ಗುರುರಾಜ್ ಪೂಜಾರಿ ಚಿನ್ನದ ಪದಕ ಗೆದ್ದಿದ್ದರು.