ಬಂಟ್ವಾಳ, ಜೂ. 28 (DaijiworldNews/MB) : ಎಷ್ಟೇ ತೊಂದರೆಗಳಿದ್ದರೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯಬೇಕೆಂಬ ಉತ್ಸಾಹದಿಂದ ಯಾರ ಸಹಾಯವೂ ಪಡೆಯದೇ ನೆಲದ ಮೇಲೆ ಕುಳಿತು ತನ್ನ ಕಾಲಿನ ಬೆರಳುಗಳ ಮೂಲಕವೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಬಂಟ್ವಾಳದ ಪ್ರತಿಭಾವಂತ ಬಾಲಕ ಕೌಶಿಕ್ಗೆ ಪಿಯುಸಿ ಶಿಕ್ಷಣಕ್ಕೆ ನೆರವಾಗುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ನೀಡಿದ್ದಾರೆ.
ದಾಯ್ಜಿವಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗ ಪರೀಕ್ಷೆ ನಡೆಯುತ್ತಿರುವ ಕಾರಣದಿಂದ ಎಲ್ಲಾ ಪರೀಕ್ಷೆಗಳು ಮುಗಿದ ಬಳಿಕ ಬಾಲಕನ ಮನೆಗೆ ಭೇಟಿ ನೀಡಿ ಅವನ ಆಸಕ್ತಿಗೆ ಅನುಸಾರವಾಗಿ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಯ ಎಸ್ಎಸ್ಎಲ್ಸಿ ಅಂಕ ಮಾತ್ರವಲ್ಲದೇ ಆಸಕ್ತಿಯನ್ನು ಕೇಳಿ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಂಟ್ವಾಳ ದ ಕಂಚಿಕಾರ ಪೇಟೆ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ಎರಡನೇ ಮಗ ಕೌಶಿಕ್. ಈತ ಹುಟ್ಟಿನಿಂದಲೇ ಎರಡು ಕೈಗಳಿಲ್ಲದೆ ಬದುಕಿಗೆ ಅಡಿಯಿಟ್ಟವನು. ಆದರೂ ಯಾವುದೇ ಅಂಜಿಕೆಯಿಲ್ಲದೆ ಯಾರಿಗೂ ಕಡಿಮೆಯಿಲ್ಲದ ರೀತಿಯಲ್ಲಿ ಈತ ಪ್ರತಿಭಾನ್ವಿತ ಬಾಲಕ.
ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿ. ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಾಲಕ ಎತ್ತಿದ ಕೈ. ಈತ ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಭಿಸಿದ ಕಾರಣ ಇಷ್ಟು ಎರಡು ಕೈಗಳಿಲ್ಲದ ಕೌಶಿಕ್ನಿಗೆ ಆತನ ಕಾಲುಗಳೇ ಕೈಯಾಗಿತ್ತು. ಜೂನ್ 25 ರಂದು ಆರಂಭವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಾಲಿನಿಂದ ಬರೆದು ಮೆಚ್ಚುಗೆ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಓದಿನ ಜೊತೆ ಕೌಶಿಕ್ ಡ್ಯಾನ್ಸ್, ಡ್ರಾಯಿಂಗ್, ಈಜು, ಕ್ರಿಕೆಟ್, ಹೀಗೆ ಎಲ್ಲ ಆಟದಲ್ಲಿಯೂ ಎತ್ತಿದ ಕೈ. ಈತನಿಗೆ ಆಟೋಟಗಳಲ್ಲಿ ಅನೇಕ ಬಹುಮಾನಗಳು ದೊರೆತಿವೆ.