ಶಿವಮೊಗ್ಗ, ಏ 6: ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಸಮಾವೇಶವನ್ನು ಎಲ್ಗರೂ ಸೇರಿ ವಿರೋಧಿಸಬೇಕು ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಇಲ್ಲಿನ ಎನ್.ಡಿ.ವಿ ಮೈದಾನದಲ್ಲಿ ಸಂವಿಧಾನ ಉಳಿವಿಗಾಗಿ ನಡೆದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಮೋದಿ ಪ್ರಚಾರ ಸಮಾವೇಶ ನಡೆಸಲಿದ್ದಾರೆ. ಈ ಸಮಾವೇಶವನ್ನು ಎಲ್ಲರೂ ವಿರೋಧಿಸಬೇಕು. ನಮ್ಮ ಸಂವಿಧಾನವನ್ನು ಉಳಿಸುವುದಕ್ಕಾಗಿ ಕೋಮುವಾದಿ ಶಕ್ತಿಗಳನ್ನು ತಡೆಯಲೇಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.
ಈ ಸಮಾವೇಶ ಯಾವುದೇ ಕಾರಣಕ್ಕೂ ನಡೆಯಬಾರದು. ಧ್ವನಿ ಅಡಗಿಸುವುದಕ್ಕಾಗಿ ನಾಲ್ಕೈದು ಜನ ಕಪ್ಪು ಬಾವುಟ ತೋರಿ ಪ್ರತಿಭಟಿಸಿದಂತೆ ಸಮಾವೇಶ ವಿರೋಧಿಸುವುದು ಅಲ್ಲ. ಸಾಗರದೋಪಾದಿಯಲ್ಲಿ ಮೋದಿ ಅವರನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಪ್ರಗತಿಪರರು, ದಲಿತರು ಮತ್ತು ಹಿಂದುಳಿದವರು ಒಗ್ಗೂಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ಕೆ ವಿರೋಧಿಸಬೇಕು. ಮಾತ್ರವಲ್ಲ ಇದೇ ವೇಳೆ 2 ಕೋಟಿ ಉದ್ಯೋಗ ಮತ್ತು ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವಂತೆ ಮೋದಿಗೆ ಸವಾಲು ಹಾಕಬೇಕು ಎಂದು ತಿಳಿಸಿದರು.