ಮಂಗಳೂರು, ಜೂ. 28 (DaijiworldNews/MB) : ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸುರತ್ಕಲ್ನ ಇಡ್ಯದ 31 ವರ್ಷದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ಮಧ್ಯಾಹ್ನ ಬೋಳಾರದಲ್ಲಿ ನಡೆದಿದ್ದು 3 ಗಂಟೆಗಳಿಂದ ಮೃತ ಸೋಂಕಿತ ಯುವಕನ ಶವ ಸಂಸ್ಕಾರಕ್ಕಾಗಿ ಸಿಬ್ಬಂದಿಗಳು ಅಲೆದಾಟ ನಡೆಸುತ್ತಿದ್ದಾರೆ.
ಇಡ್ಯಾ ಗ್ರಾಮದ 31 ವರ್ಷದ ಸೋಂಕಿತ ಮೃತಪಟ್ಟಿದ್ದು ಇಡ್ಯಾ ಮಸೀದಿ ಕಬರ್ ಗುಂಡಿಯಲ್ಲಿ ನೀರು ತುಂಬಿದ ಕಾರಣದಿಂದ ಬೋಳಾರ ಬಳಿಯ ಮಸೀದಿಯಲ್ಲಿ ಅಧಿಕಾರಿಗಳು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುರತ್ಕಲ್ ಮಸೀದಿಯಲ್ಲೇ ದಫನ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಯುವಕನ ಮೃತದೇಹ 12 ಗಂಟೆಯಿಂದ ಅಂಬ್ಯುಲೆನ್ಸ್ನಲ್ಲೇ ಇದ್ದು ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಈ ಹಿಂದೆ ಬಂಟ್ವಾಳ ತಾಲೂಕಿನ 71 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದಾಗ ಸುರತ್ಕಲ್ ಸಮೀಪದ ಪಚ್ಚನಾಡಿ ಹಿಂದೂ ರುಧ್ರಭೂಮಿಯಲ್ಲಿ ಸ್ಥಳೀಯರು ಸೇರಿದಂತೆ ಶಾಸಕರು ಕೂಡಾ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ತೀರಾ ಖಂಡನೆಗೆ ಕಾರಣವಾಗಿತ್ತು.