ಮಂಗಳೂರು, ಜೂ. 28 (DaijiworldNews/SM): ಸ್ಥಳೀಯರ ಎಚ್ಚರಿಕೆಯನ್ನು ಕಡೆಗಣಿಸಿ ಸಮುದ್ರಕ್ಕಿಳಿದ ಪುತ್ತೂರು ಮೂಲದ ಯುವಕರನ್ನು ಪ್ರಾಣದ ಹಂಗು ತೊರೆದು ಯುವಕರ ತಂಡವೊಂದು ರಕ್ಷಿಸಿರುವ ಘಟನೆ ನಡೆದಿದೆ.
ಪುತ್ತೂರು ಮೂಲದ ಯುವಕರ ತಂಡ ಮಂಗಳೂರಿಗೆ ವಿಹಾರಕ್ಕೆ ಬಂದಿತ್ತು. ಈ ತಂಡ ಮಂಗಳೂರಿನ ಗುಡ್ಡೆಕೊಪ್ಳ ಬಳಿ ಸಮುದ್ರಕ್ಕೆ ಇಳಿದಿದೆ. ಆ ಸಂದರ್ಭದಲ್ಲಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಆದರೆ, ಸ್ಥಳೀಯರ ಎಚ್ಚರಿಕೆಯನ್ನು ಲೆಕ್ಕಿಸದೆ ಯುವಕರು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ತಂಡ ಸಮುದ್ರಪಾಲಾಗುತ್ತಿದ್ದರು.
ಯುವಕರನ್ನು ರಕ್ಷಣೆ ಮಾಡುವುದು ಅಸಾಧ್ಯವಾಗಿತ್ತು. ಅಗ್ನಿಶಾಮಕದಳ, ಕರಾವಳಿ ಕಾವಲು ಪಡೆಯಿಂದಲೂ ಯುವಕರನ್ನು ರಕ್ಷಿಸಲು ಅಸಾಧ್ಯವಾದ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿದ್ದ ಶ್ರೀಯಾನ್ ಹಾಗೂ ಸುಮನ್ ಗಮನಿಸಿದ್ದು, ಡ್ರಜ್ಜರ್ ಸಮೀಪ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಣೆ ಮಾಡಿದ್ದಾರೆ. ಈ ಇಬ್ಬರು ಯುವಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.