ಮಂಗಳೂರು, ಜೂ. 29 (DaijiworldNews/MB) : ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಕೆಲವರು ಎಸ್ಕೇಪ್ ಆಗಿದ್ದಾರೆ ಎನ್ನುವ ಸುದ್ದಿಯಾಗುತ್ತಿರುವಂತೆಯೇ ದಾಯ್ಜಿವಲ್ಡ್ಗೆ ಮಾಹಿತಿ ನೀಡಿರುವ ದುಬೈನಿಂದ ಬಂದು ಕ್ವಾರಂಟೈನ್ಗೆ ಒಳಗಾಗಿರುವವರು, ನಾವು ಎಸ್ಕೇಪ್ ಆಗಿಲ್ಲ. ಮಂಗಳೂರಿನ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇದ್ದೇವೆ. ಕ್ವಾರಂಟೈನ್ಗೆ ಒಳಗಾಗದೆಯೇ ಎಸ್ಕೇಪ್ ಆಗಿದ್ದೇವೆ ಎಂದು ಹೇಳುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಯೊಂದಿಗೆ ಮಾತನಾಡಿರುವ ದುಬೈನಿಂದ ಬಂದು ಕ್ವಾರಂಟೈನ್ಗೆ ಒಳಗಾಗಿರುವ, ''ನಾವು ಶನಿವಾರ ಕಣ್ಣೂರಿಗೆ ಬಂದಿದ್ದು ಮಂಗಳೂರಿಗೆ ಬಸ್ ಹಾಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಕಣ್ಣೂರಿಗೆ ತಲುಪಿದಾಗ ಬಸ್ ವ್ಯವಸ್ಥೆ ಇರಲಿಲ್ಲ. ಕಣ್ಣೂರಿನ ಮೂರು ಹೊಟೇಲ್ಗಳಲ್ಲಿ ನಾವು ಕ್ವಾರಂಟೈನ್ಗೆ ಒಳಗಾದೆವು. ಅಲ್ಲಿಂದ ಮಂಗಳೂರಿಗೆ ಹೋಗಲು ಹೇಳಿದ ಕಾರಣ ಬಳಿಕ ನಿನ್ನೆ ಸಂಜೆ ಸೇವಾ ಸಿಂಧೂ ಆಪ್ ಮೂಲಕ ನೊಂದಾಯಿಸಿ ಮಂಗಳೂರಿಗೆ ಹೊರಟಿದ್ದೇವೆ. ತಲಪಾಡಿ ಟೋಲ್ಗೇಟ್ನಲ್ಲಿ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ನಮೂದಿಸಿ ಮಂಗಳೂರಿನ ಹೊಟೇಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದೇವೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಯಾವ ಅಧಿಕಾರಿಗಳನ್ನು ನಾವು ಭೇಟಿಯಾಗಿಲ್ಲ. ನಮ್ಮ ಗಂಟಲ ದ್ರವದ ಮಾದರಿ ಸಂಗ್ರಹಕ್ಕಾಗಿ ಸಿಬ್ಬಂದಿಗಳು ಬಂದು ನಮ್ಮನ್ನು ಕರೆದುಕೊಂಡು ಹೋಗುವುದಾಗಿ ಹೊಟೇಲ್ನವರು ನಮಗೆ ತಿಳಿಸಿದ್ದಾರೆ. ದುಬೈನಲ್ಲಿ ಇರುವಾಗ ನಮಗೆ ಮಂಗಳೂರಿಗೆ ಬರುವ ವಿಮಾನದ ವ್ಯವಸ್ಥೆ ಮಾಡಲಾಗುವುದಿಲ್ಲ. ಕಣ್ಣೂರಿಗೆ ನೀವು ಹೋಗುವುದಾದರೆ ಅಲ್ಲಿಂದ ಮಂಗಳೂರಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಬಳಿಕ ಯಾವ ವ್ಯವಸ್ಥೆಯೂ ಇರಲಿಲ್ಲ. ಅಷ್ಟೇ ಅಲ್ಲದೇ ಕಣ್ಣೂರಿನಲ್ಲಿ 7 ದಿನ ಬಳಿಕ ಮಂಗಳೂರಿನಲ್ಲಿ 7 ದಿನ ಕ್ವಾರಂಟೈನ್ ಒಳಗಾಗುವಂತೆ ಸೂಚಿಸಿದ್ದರು ಎಂದು ತಿಳಿಸಿದ್ದಾರೆ.
ಕಣ್ಣೂರಿನಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದ ಅವರನ್ನು ನಿನ್ನೆ ಸಂಜೆ ಮಂಗಳೂರಿಗೆ ಹೋಗುವಂತೆ ಸೂಚಿಸಲಾಗಿದ್ದು ಇದೀಗ ಅವರು ಕ್ವಾರಂಟೈನ್ಗೆ ಒಳಗಾಗಿದ್ದ ಕಣ್ಣೂರಿನ ಮೂರು ಹೊಟೇಲ್ಗಳನ್ನು ಸೀಲ್ಡೌನ್ ಮಾಡಲಾಗಿದೆ. ಇಂದು ಬೆಳಿಗ್ಗೆ ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಮಂಗಳೂರಿನವರು ಎಸ್ಕೇಪ್ ಆಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.