ಮಂಗಳೂರು, ಜೂ 29 (Daijiworld News/MSP): ಅಪ್ಪನನ್ನು ಮಗ ದರದರನೇ ಹೊಟೇಲ್ ನ ಮೊದಲ ಮಹಡಿಯಿಂದ ರಸ್ತೆವರೆಗೆ ಎಳೆದು ತಂದ ಅಮಾನವೀಯ ಘಟನೆ ಜೂ.29ರ ಸೋಮವಾರ 12 ಗಂಟೆ ವೇಳೆಗೆ ದೇರಳಕಟ್ಟೆ ಖಾಸಗಿ ಲಾಡ್ಜ್ ಬಳಿ ನಡೆದಿದ್ದು ಪುತ್ರನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
15 ದಿನಗಳ ಹಿಂದೆ ಉಪ್ಪಳ ಮೂಲದ ಅಪ್ಪ- ಮಗ ಹೊಟೇಲ್ ನೆಲೆಸಿದ್ದು, ಲಾಡ್ಜ್ ಮುಂಭಾಗದ ಖಾಸಗಿ ಆಸ್ಪತ್ರೆಯಲ್ಲಿ ವಯೋ ವೃದ್ದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಆದರೆ ಇಂದು ಏಕಾಏಕಿ ಅಪ್ಪನನ್ನು ಅರೆನಗ್ನವಾಗಿಯೇ ಎಳೆದು ತಂದ ಕಿರಾತಕ ಪುತ್ರ ರಸ್ತೆಯಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಪುತ್ರನ ಅಮಾನವೀಯ ಕೃತ್ಯವನ್ನು ಸ್ಥಳದಲ್ಲಿ ಸಾರ್ವಜನಿಕರು ತಡೆದು ನಿಲ್ಲಿಸದೇ , ಸುಮ್ಮನೆ ನೋಡುತ್ತಿದ್ದು ಇದರ ವಿರುದ್ದವೂ ಆಕ್ರೋಶ ವ್ಯಕ್ತವಾಗಿದೆ. ರಸ್ತೆಯಲ್ಲೇ ನರಳಾಡುತ್ತಿದ್ದ ವಯೋ ವೃದ್ದನ ರಕ್ಷಿಸಿ ಸ್ಥಳೀಯರು ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.