ಬೆಳ್ತಂಗಡಿ, ಜೂ 30 (Daijiworld News/MSP): ಧರ್ಮಸ್ಥಳ ಠಾಣೆಯ ವ್ಯಾಪ್ತಿಯಲ್ಲಿ ಯುವಕನೋರ್ವ ಅಪ್ರಾಪ್ತೆಯನ್ನು ಮದುವೆಯಾದ ಘಟನೆ ಜೂ.29 ರ ಸೋಮವಾರ ನಡೆದಿದ್ದು ಯುವಕನ ಮೇಲೆ ಫೋಕ್ಸೋ ದಾಖಲಾಗಿದೆ.
ಬಾಲಕಿಯು ಮನೆಯಿಂದ ಅಜ್ಜನ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಳು. ಬಳಿಕ ಆಕೆಯನ್ನು ಯುವಕನು ದೇವಸ್ಥಾನದಲ್ಲಿ ವಿವಾಹವಾಗಿರುವುದು ತಿಳಿದು ಬಂತು.
ಬಾಲಕಿಯ ಪೋಷಕರ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯ ಪೊಲೀಸರು ಕಾಣೆಯಾಗಿರುವ ಕುರಿತು ತನಿಖೆ ನಡೆಸಿದ್ದರು. ತನಿಖೆ ವೇಳೆ ಬಾಲಕಿಯನ್ನು ತಾಲೂಕಿನ ಲಾಯಿಲ ಗ್ರಾಮದ ಮುದ್ರಾಜೆಯ ಕಿರಣ್ ಎಂಬಾತ ಅಪಹರಿಸಿ ಬೆಳ್ತಂಗಡಿಯ ನಾಗವರ್ಮ ಮೇಲಂತಬೆಟ್ಟು ದೇವಸ್ಥಾನದಲ್ಲಿ ಅನಧಿಕೃತವಾಗಿ ಮದುವೆಯಾಗಿರುವುದಾಗಿ ತಿಳಿದುಬಂದಿದೆ.
ಅಪ್ರಾಪ್ತೆಯನ್ನು ವಿವಾಹವಾದ ಹಿನ್ನಲೆಯಲ್ಲಿ ಕಿರಣ್ ವಿರುದ್ಧ ಪೋಕ್ಸೋ ಹಾಗೂ ಬಾಲವಿವಾಹ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.