ಕಾಸರಗೋಡು, ಜೂ 30 (Daijiworld News/MSP): ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಮುದಾಯ ಹರಡುವಿಕೆ ಭಯ ಪಡುವ ಅಗತ್ಯ ಇಲ್ಲ. ಎರಡನೇ ಹಂತದಲ್ಲಿ 70 ಮತ್ತು ಮೂರನೇ ಹಂತದಲ್ಲಿ 11 ಮಂದಿಗೆ ಮಾತ್ರ ಸಂಪರ್ಕದಿಂದ ಸೋಂಕು ತಗಲಿದೆ. ಇದರಿಂದ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ . ಡಿ ಸಜಿತ್ ಬಾಬು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 443 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಒಂದೇ ಒಂದೂ ಸಾವು ಸಂಭವಿಸಿಲ್ಲ . ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಾಧನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಫೆಬ್ರವರಿ ಕಾಸರಗೋಡಿನಲ್ಲಿ ಮೊದಲ ಸೋಂಕು ದೃಢಪಟ್ಟಿತ್ತು . ಭಾರತದಲ್ಲೇ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು . ಬಳಿಕ 39 ದಿನಗಳ ಬಳಿಕ ಮಾರ್ಚ್ 14 ರಂದು ಎರಡನೇ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಮಾರ್ಚ್ 17 ರಂದು ಮೂರನೇ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಾ ಸಾಗಿತ್ತು . ಜಿಲ್ಲೆಯಲ್ಲಿ ಫೆಬ್ರವರಿ ಮೂರರಂದು ಚೀನಾ ದ ವುಹಾನ್’ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಮೊದಲ ಕೊರೊನಾ ದೃಢಪಟ್ಟಿತ್ತು . ಮಾರ್ಚ್ 14 ರಿಂದ ಮೇ ಒಂದರ ತನಕದ ಅವಧಿಯಲ್ಲಿ 178 ಮಂದಿಗೆ ಸೋಂಕು ದೃಢಪಟ್ಟಿ ತ್ತು . ಈ ಪೈಕಿ 108 ಪ್ರಕರಣಗಳು ವಿದೇಶದಿಂದ ಹಾಗೂ 70 ಸಂಪರ್ಕದಿಂದ ಬಂದವುಗಳಾಗಿವೆ.
ಜಿಲ್ಲೆಯಲ್ಲಿ ಕಳೆದ 35 ದಿನಗಳಿಂದ ಸಂಪರ್ಕದಿಂದ ಯಾರಿಗೂ ಸೋಂಕು ದೃಢಪಟ್ಟಿಲ್ಲ . ಇದರಿಂದ ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆ ಯ ಭಯ ಇಲ್ಲ. ಆದರೂ ಜನರು ಸಾಮಾಜಿಕ ಅಂತರ ಪಾಲಿಸಿ , ಮಾಸ್ಕ್ ಧರಿಸಿ , ಸ್ವಚ್ಛತೆ ಕಾಪಾಡಿ ಆರೋಗ್ಯ ಇಲಾಖೆಯ ಮಾನದಂಡಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.