ಮಂಗಳೂರು, ಏ 7: ನೀತಿ ಸಂಹಿತೆಗೆ ಮಣ್ಣು ಹಾಕಿ, ಅದೊಂದು ನೀತಿ ಇಲ್ಲದ ಸಮಿತಿ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಗೋ ಕಳ್ಳತನ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6 ನೇ ದಿನದಂದು ಭೇಟಿ ನೀಡಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆಯ ವಿರುದ್ಧ ಕಿಡಿಕಾರಿದ್ದಾರೆ. ಮೊಗಲರು ಮತ್ತು ಬ್ರಿಟೀಷರಿಗಿಂತ ಕೆಟ್ಟದಾಗಿ ಅಧಿಕಾರಶಾಹಿಗಳು ಇಲ್ಲಿ ರಾಜ್ಯ ಆಳುತ್ತಿದ್ದಾರೆ. ಹಿಂದು ಧರ್ಮವನ್ನು, ಸಂಸ್ಕೃತಿಯನ್ನು ಅಳಿಸುವ ಎಲ್ಲಾ ಪ್ರಯತ್ನದಲ್ಲಿ ಸರಕಾರ ತೊಡಗಿಸಿಕೊಂಡಿದೆ ಎಂದರು.
ಇದೇ ವೇಳೆ ಖಾದರ್ ತೆರಳಿದ ದೇವಾಲಯಕ್ಕೆ ಮತ್ತೆ ಬ್ರಹ್ಮಕಲಶ ಆಗಬೇಕು ಎಂದು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಲ್ಲಡ್ಕ ಭಟ್, ಯಾವ ಮಾಧ್ಯಮದವರೂ ತನ್ನನ್ನು ಕೇಳಿದರೂ ನಾನು ಅದೇ ಮಾತನ್ನು ಹೇಳುತ್ತೇನೆ. ಅದು ನೂರಕ್ಕೆ ನೂರು ಸತ್ಯ, ದನ ತಿನ್ನುವವರನ್ನು ದೇವಾಲಯದೊಳಕ್ಕೆ ಕರೆಸಿ ಗೌರವಿಸುವುದು ತಪ್ಪು. ಮತದಾನ ಪವಿತ್ರವಾಗಲು ಹಿಂದೂ ಧರ್ಮದ ಸಂರಕ್ಷಣೆಯಾಗಬೇಕಿದೆ ಎಂದು ಹೇಳಿದರು.
ಇದೀಗ ರಾಜಕೀಯ ಭಾಷಣದ ಜೊತೆಗೆ ಚುನಾವಣಾ ನೀತಿ ಸಂಹಿತೆಯನ್ನು ಟೀಕಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.