ಮಂಗಳೂರು, ಜೂ 30 (Daijiworld News/MSP): ಮನೋರಂಜನೆಯೊಂದಿಗೆ,ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳಿಗೆ ಮನ್ನಣೆ ನೀಡುವ ದಾಯ್ಜಿವಲ್ಡ್ ಟಿವಿ, ವಿದೇಶದಲ್ಲಿರುವ ವೀಕ್ಷಕರಿಗೆ ವಿಶೇಷ ಸಂಗೀತ ಕಾರ್ಯಕ್ರಮವನ್ನು ಜುಲೈ 3 ರ ಶುಕ್ರವಾರ ರಾತ್ರಿ 8.30ಕ್ಕೆ ಆಯೋಜಿಸಲು ಸಜ್ಜಾಗಿದೆ. 'ದಾಯ್ಜಿವರ್ಲ್ಡ್ ಟು ರೆಸ್ಟ್ ಆಫ್ ದಿ ವರ್ಲ್ಡ್' ಎಂಬ ಅಡಿಬರಹದೊಂದಿಗೆ “ವರ್ಚುವಲ್ ಕನ್ಸರ್ಟ್ - ಎಂಟರ್ಟೈನ್ಮೆಂಟ್ ಅನ್ಲಾಕ್ ' ಎಂಬ ಶೀರ್ಷಿಕೆಯಡಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.
ಖ್ಯಾತ ಸಂಗೀತಕಾರರಾದ ಹಾಗೂ ಗಿಟಾರ್ ಮಾಂತ್ರಿಕರಾದ ರಾಜ್ ಗೋಪಾಲ್ ಅವರು ಸಂಗೀತ ತಂಡವನ್ನು ಮುನ್ನಡೆಸಲಿದ್ದು, ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್ ಮತ್ತು ಸಂಗೀತ ಬಾಲಚಂದ್ರನ್ ಅವರು ವಿವಿಧ ಭಾಷೆಗಳ ಹಾಡುಗಳೊಂದಿಗೆ ಪಶ್ಚಿಮಾತ್ಯ ದೇಶಗಳಲ್ಲಿ ವಾಸಿಸುವ ಅಸಂಖ್ಯಾತ ಕನ್ನಡಿಗರಿಗೆ ಸಂಗೀತದ ರಸದೌತಣ ನೀಡಲಿದ್ದಾರೆ.
ಹಿನ್ನಲೆ ಸಂಗೀತದಲ್ಲಿ ಖ್ಯಾತ ಸಂಗೀತಗಾರರಾದ ದೀಪಕ್ ಜಯಶೀಲನ್, ರಾಜೇಶ್ ಭಗವತ್, ರೋಶನ್ ಫರ್ನಾಂಡಿಸ್, ವರುಣ್ ರಾವ್, ಸುಮುಖ್ ಮತ್ತು ಆಶಿತ್ ಪಿಂಟೊ ಭಾಗಿಯಾಗಲಿದ್ದಾರೆ. ಇವಿಷ್ಟೇ ಅಲ್ಲದೆ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹನೀಫ್, ಶ್ರೀಕಾಂತ್ ಕಾಮತ್, ರಂಜನ್ ದಾಸ್, ನಯನ ರಾಜ್ ಗೋಪಾಲ್ , ವೈಷ್ಣವ ಹಾಗೂ ಇತರ ಅನೇಕ ಗಾಯಕರ ಸುಮಧುರ ಸಂಗೀತ ಸವಿಯಬಹುದಾಗಿದೆ.
ಇನ್ನೂ ವಿಶೇಷವೆಂದರೆ ತುಳುನಾಡ ಮಾಣಿಕ್ಯ ಖ್ಯಾತಿಯ ಸಿನಿ ನಟ ಅರವಿಂದ್ ಬೋಳಾರ್ ಮತ್ತು ದಾಯ್ಜಿವರ್ಲ್ಡ್ ಮೀಡಿಯಾ ಗ್ರೂಪ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಇವರಿಬ್ಬರು ಜತೆಯಾಗಿ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಈ ನೇರ ಪ್ರಸಾರದ ಸಂಗೀತ ರಸಮಂಜರಿಯಲ್ಲಿ 20 ಹಾಡುಗಳ ಪ್ಯಾಕೇಜ್ ಇರಲಿದ್ದು ಗತ ಕಾಲದ ತುಳು, ಕನ್ನಡ, ಕೊಂಕಣಿ ಮತ್ತು ಹಿಂದಿ ಭಾಷೆಯ ಸೂಪರ್ ಹಿಟ್ ಹಾಡುಗಳು ಮೂಡಿಬರಲಿವೆ.
ಯೂಟ್ಯೂಬ್ ಚಾನೆಲ್ ಮೂಲಕ ಮಾತ್ರ ವೀಕ್ಷಕರಿಗೆ ವರ್ಚುವಲ್ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದ್ದು https://www.youtube.com/channel/UC66WtcGSVl0mWsZHMQOUoxg/featured ಮೂಲಕ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. (ಸ್ಥಳೀಯ ಟಿವಿ ಸೆಟ್-ಟಾಪ್ ಬಾಕ್ಸ್ ಗಳಲ್ಲಿ ಪ್ರಸಾರವಿಲ್ಲ). ಈ ನೇರಪ್ರಸಾರ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 8:30 ಕ್ಕೆ ಹಾಗೂ ಸಂಜೆ 7:00 ಕ್ಕೆ-ಒಮಾನ್, ಯುಎಇ, ಸಂಜೆ 6:00ಕ್ಕೆ ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ನಲ್ಲಿ ಪ್ರಸಾರವಾಗಲಿದೆ.
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಯಾವತ್ತೂ ತಮ್ಮ ಒಗ್ಗಟ್ಟು ಮತ್ತು ತಮ್ಮ ಉದಾರ ಸಹಾಯ ಹಸ್ತಗಳಿಗೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ನೆಲೆಸಿರುವ ತುಳುನಾಡಿನ ಜನರು ಮಣ್ಣಿನ ಸ್ವಂತಿಕೆಯನ್ನು ಬಿಟ್ಟುಕೊಡದೆ ನೆಲೆಯಾದಲೆಲ್ಲಾ ತುಳುನಾಡಿನ ಸಂಸ್ಕೃತಿಯ ಕಂಪನ್ನು ಪಸರಿಸುವಲ್ಲಿ ಮುಂದಿದ್ದಾರೆ. ಆದರೆ ಕೋವಿಡ್ -19 ಸಾಂಕ್ರಮಿಕ ರೋಗದ ಬಳಿಕ ಜಾಗತಿಕ ಮಟ್ಟದಲ್ಲಿ ಬದಲಾದ ಪರಿಸ್ಥಿತಿ ವಿದೇಶದಲ್ಲಿರುವ ನಮ್ಮವರ ತಾಯ್ನಾಡಿನೊಂದಿಗೆ ಇದ್ದ ಬಲವಾದ ಸಂಪರ್ಕವನ್ನು ದುರ್ಬಲಗೊಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಇಂದು ಅನಿವಾಸಿ ಭಾರತೀಯ ಸಮುದಾಯವು ಬಹಳಷ್ಟು ಬಹಳ ಕಠಿಣ ಪರಿಸ್ಥಿತಿ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದೆ.
ಉತ್ತಮ ಉದ್ಯೋಗ, ಆದಾಯವಿದ್ದ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರು ತಮ್ಮೂರಿಗೆ ಬೇಕಾದ ಸಹಾಯಹಸ್ತವನ್ನು ಚಾಚಲು ಎಂದೂ ಸಿದ್ದಹಸ್ತರಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂದು ತಾಯ್ನಾಡಿನ ಜನರಿಂದ ಅವರಿಗೆ ಮನೋಸ್ಥೈರ್ಯ ತುಂಬುವಂತಹ ಬೆಂಬಲಕ್ಕಾಗಿ ಹಾತೊರೆಯುವ ಕಾಲ ಬಂದಿದೆ. ಹೀಗಾಗಿ ಕಾರ್ಯಕ್ರಮವನ್ನು ಅತ್ಯಂತ ಕಷ್ಟದ ಸಮಯದಲ್ಲಿರುವ ಎಲ್ಲಾ ಅನಿವಾಸಿ ಭಾರತೀಯರ ಮನೋಸ್ಥೈರ್ಯವನ್ನು ಹೆಚ್ಚಿಸಲು ಹಾಗೂ ಅವರೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಲು ಈ ಸಂಗೀತ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.
ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿರುವ ದಾಯ್ಜಿವಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, “ಕೋವಿಡ್ ನಂತರದ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ಕಲಾವಿದರು ಮೂರು ತಿಂಗಳಿನಿಂದ ಯಾವುದೇ ಕಾರ್ಯಕ್ರಮಗಳು ಇಲ್ಲದೆ ನಿಷ್ಕ್ರೀಯರಾಗಿದ್ದಾರೆ. ಅವರಿಗೂ ಕೆಲವು ಲವಲವಿಕೆಯ ಚಟುವಟಿಕೆಗಳ ಅಗತ್ಯವಿದೆ.ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳೇ ಕಲಾವಿದರ ಜೀವನೋಪಾಯವಾಗಿದ್ದು ಅದರ ಮೇಲೆ ಸಂಪೂರ್ಣ ನಿಷೇಧ ಹೇರಿರುವುದರಿಂದ ಅನೇಕ ಕಲಾವಿದರು ಸಂಕಷ್ಟಕ್ಕೀಡಾಗಿದ್ದಾರೆ. ಈ ಕಾರ್ಯಕ್ರಮ ಮೂಲಕ ಯಾರಾದರೂ ಆರ್ಥಿಕವಾಗಿ ಬೆಂಬಲಿಸಲು ಬಯಸಿದರೆ, ಆ ಮೊತ್ತವು ನೇರವಾಗಿ ಕೊವೀಡ್ ನಿಂದ ಕಷ್ಟದಲ್ಲಿರುವ ಕಲಾವಿದರಿಗೆ ತಲುಪುತ್ತದೆ. ಈ ಪ್ರದರ್ಶನವು ತುಳುನಾಡಿನ ಖ್ಯಾತ ಸಂಗೀತಗಾರ ರಾಜ್ ಗೋಪಾಲ್ ಅವರ ನೇತೃತ್ವದಲ್ಲಿ ನಡೆಯಲಿದೆ. ಅಲ್ಲದೆ, ಅನಿವಾಸಿ ಭಾರತೀಯ ಸ್ನೇಹಿತರಿಂದ ಹಲವಾರು ವಿನಂತಿಯ ಮೇರೆಗೆ ಇಂಥಹ ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದಿದ್ದಾರೆ.
ಈ ಪ್ರದರ್ಶನದ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:ರಾಜ್ ಗೋಪಾಲ್: +91 94490 47287 ಅಥವಾ +91 82174 66588 ( ವಾಟ್ಸಾಪ್ ಮಾತ್ರ - ದಾಯ್ಜಿವರ್ಲ್ಡ್)