ಕಾಪು, ಜೂ 30 (Daijiworld News/MSP): ಕಾಪು ತಾಲೂಕಿನ ಪಾದೂರು ಐಎಸ್ಪಿಆರ್ಎಲ್ ಕಚ್ಛಾ ತೈಲ ಸಂಗ್ರಹಾಗಾರದಲ್ಲಿ ಅನಿಲ ಸೋರಿಕೆಯ ಭೀತಿ ಎದುರಾಗಿದ್ದು, ಇದರಿಂದಾಗಿ ಗ್ರಾಮಸ್ಥರ ಆತಂಕ ಮನೆ ಮಾಡಿದೆ. ಐಎಸ್ಪಿಆರ್ಎಲ್ ಘಟಕದಲ್ಲಿ ಅನಿಲ ಸೋರಿಕೆ ಉಂಟಾದ ಪರಿಣಾಮ ಪಾದೂರು ಕೂರಾಲು ಪರಿಸರದಲ್ಲಿ ಮೂರ್ನಾಲ್ಕು ಮಂದಿ ಮಕ್ಕಳು ವಾಂತಿ ಮಾಡಿದ್ದು, ಕೆಲವು ಮನೆಗಳಲ್ಲಿನ ಹಿರಿಯರು ಮೂರ್ಛೆ ತಪ್ಪಿದ ಅನುಭವಕ್ಕೊಳಗಾಗಿದ್ದಾರೆ. ಸೋಮವಾರ ಬೆಳಗ್ಗೆ ೧೧ಗಂಟೆಗೆ ಅನಿಲದ ವಾಸನೆ ಬರಲಾರಂಭಿಸಿದ್ದು ಸ್ಥಳೀಯರು ಈ ಬಗ್ಗೆ ಮಜೂರು ಗ್ರಾಮ ಪಂಚಾಯತ್, ಜನಜಾಗೃತಿ ಸಮಿತಿ ಮತ್ತು ವಿವಿಧ ಜನಪ್ರತಿನಿಽಗಳಿಗೆ ಮಾಹಿತಿ ನೀಡಿದ್ದರು. ಆದರೆ ಕಂಪೆನಿ ಈ ವಿಚಾರದಲ್ಲಿ ನಿರ್ಲಕ್ಷ ವಹಿಸಿದ್ದು, ಸಂಜೆಯವರೆಗೂ ಯಾವುದೇ ತಪಾಸಣೆಯನ್ನೂ ನಡೆಸಿಲ್ಲ ಎನ್ನುವುದು ಸ್ಥಳೀಯರ ಅಕ್ರೋಶವಾಗಿದೆ.
ಜನಪ್ರತಿನಿದಿಗಳು ಮತ್ತು ಸ್ಥಳೀಯರ ನಿಯೋಗ ಅನಿಲ ವಾಸನೆಯ ಮೂಲ ಪತ್ತೆಗೆ ಮುಂದಾಗಿರುವ ಬಗ್ಗೆ ಮಾಹಿತಿ ಪಡೆದ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಸಿಐ ಮಹೇಶ್ ಪ್ರಸಾದ್, ಮಾಲಿನ್ಯ ನಿಯಂತ್ರಣ ಅದಿಕಾರಿ ವಿಜಯಾ ಹೆಗ್ಡೆ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕಂಪೆನಿಯ ಅದಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮಾಹಿತಿ ಪಡೆದುಕೊಂಡರು.
ಐಎಸ್ಪಿಆರ್ಎಲ್ ಪ್ರೊಜೆಕ್ಟ್ ಮ್ಯಾನೇಜರ್ ವಿಪಿನ್ ಕುಮಾರ್ ಅನಿಲ ಸೋರಿಕೆಯ ವಿಚಾರವನ್ನು ನಿರಾಕರಿಸಿದ್ದು, ಕಚ್ಛಾ ತೈಲ ಘಟಕದೊಳಗೆ ಎಲ್ಲೂ ಅನಿಲ ವಾಸನೆ ಕಂಡು ಬಂದಿಲ್ಲ. ಪಾದೂರು-ತೋಕೂರು ನಡುವಿನ ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ೩೬ ಕಿಮೀ. ಉದ್ದದ ಪೈಪ್ಲೈನ್ ಇದ್ದು ಪೈಪ್ಲೈನ್ನಲ್ಲಿ ಏನಾದರೂ ಸೋರಿಕೆ ಇದೆಯೇ ಎನ್ನುವುದನ್ನು ತಜ್ಞರ ಮೂಲಕ ಪರಿಶೀಲಿಸಲಾಗುವುದು. ದೂರಿನ ಹಿನ್ನೆಲೆಯಲ್ಲಿ ಕಂಪೆನಿಯ ಅದಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪರಿಶೀಲನೆ ನಡೆಸಲಾಗಿದ್ದು, ೨೪ ಗಂಟೆಯೊಳಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾದಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕೆಲವು ಕಡೆಗಳಲ್ಲಿ ಕೆಟ್ಟ ವಾಸನೆಯ ಅನುಭವ ಉಂಟಾಗಿದ್ದು ವಾಸನೆ ಎಲ್ಲಿಂದ, ಮತ್ತು ಹೇಗೆ ಬಂದಿದೆ ಎನ್ನುವುದನ್ನು ಪರಿಶೀಲಿಸಲು ಐಎಸ್ಪಿಆರ್ಎಲ್ ಕಂಪೆನಿಗೆ ಸೂಚನೆ ನೀಡಲಾಗಿದೆ. ಕಂಪೆನಿಯ ಅದಿಕಾರಿಗಳು ಒಳಗಿನಿಂದ ಎಲ್ಲೂ ಸೋರಿಕೆಯಾಗಿಲ್ಲ ಎಂದು ತಿಳಿಸಿದ್ದು, ಹೊರಗಿನ ೩೬ ಕಿ.ಮೀ. ಉದ್ದದ ಪೈಪ್ಲೈನ್ನಲ್ಲಿ ಎಲ್ಲಾದರೂ ಸೋರಿಕೆ ಇದೆಯೇ ಎನ್ನುವುದನ್ನು ಪರಿಶೀಲಿಸಲಾಗುವುದು.