ಉಳ್ಳಾಲ, ಏ 07: ಕಾನೂನು ಜಾರಿ ಮಾಡಿ ಗೋವು ದರೋಡೆಕೋರರನ್ನು ಶಿಕ್ಷಿಸಿರುತ್ತಿದ್ದರೆ, ನಾವು ಪ್ರತಿಭಟಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂದು ಶ್ರೀ ಮಹಾಚಂದ್ರಾಪುರ ಮಠಧ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿ ಹೇಳಿದ್ದಾರೆ.
ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಂ ಭಟ್ ಗೋ ದರೋಡೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6 ನೇ ದಿನದಂದು ಭೇಟಿ ನೀಡಿ ಗೋಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಜೀವವನ್ನು ಹಿಂಸಿಸಿ ಕೊಂದು ತಿನ್ನುವುದು ಕೊಳಕು ಸಂಸ್ಕೃತಿ. ಗೋವಿನ ಪರವಾಗಿ ಮಾಡುತ್ತಿರುವ ಹೋರಾಟ ಅಪೂರ್ಣವಾಗಲು ನಾನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದರು.
ಪುಣ್ಯಕೋಟಿ ನಗರದ ಘಟನೆ ತಡವಾಗಿ ಗೊತ್ತಾಗಿದೆ. ಪತ್ರಿಕೆಗಳನ್ನು ಓದುವುದನ್ನು ಬಿಟ್ಟಿರುವುದರಿಂದ ಘಟನೆ ನಡೆದಿರುವುದು ಗೊತ್ತಾಗಿರಲಿಲ್ಲ. ಎ. 1 ರಂದು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚಿತ್ರವನ್ನು ನೋಡಿ ಮೊದಲಿಗೆ ಎಪ್ರಿಲ್ ಫೂಲ್ ಅಂದುಕೊಂಡರೂ ಬಳಿಕ ಪ್ರಕರಣ ಬೆಳಕಿಗೆ ಬಂದಿರುವುದು ನನಗೆ ಗೊತ್ತಾಗಿದೆ. ಸಮಾಜದಲ್ಲಿ ಒಳಿತಿಗೆ ಉಳಿಗಾಲವಿಲ್ಲದ ಸ್ಥಿತಿ, ಅನ್ಯಾಯಗಳು ಮಿತಿ ಮೀರಿದೆ. ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ನಡೆಸಿದವರು ಚೌರ್ಯ, ಕ್ರೌರ್ಯವನ್ನು ಪ್ರದರ್ಶಿಸಿದರೆ, ಅದರ ರಕ್ಷಣೆಗೆ ನಿಂತ ಗೋಶಾಲೆ ಸಿಬ್ಬಂದಿಗಳು ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಅನ್ಯಾಯದ ವಿರುದ್ಧ ನಡೆಯುತ್ತಿರುವ ಆಮರಣಾಂತ ಉಪವಾಸ ಆರನೇ ದಿನ ಪೂರೈಸಿರುವುದು ಹೆಮ್ಮೆಯ ವಿಚಾರ. ಈ ಹೋರಾಟ ಜಿಲ್ಲೆ, ರಾಜ್ಯ ಹಾಗೂ ದೆಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಗೋವುಗಳ ಜೀವ ಎಷ್ಟು ಅಮೂಲ್ಯವೋ, ಉಪವಾಸ ನಿರತರ ಜೀವವೂ ಅಷ್ಟೇ ಅಮೂಲ್ಯವಾಗಿರುತ್ತದೆ. ರಾಜಾರಾಂ ಭಟ್ ಹಾಗೂ ಅವರ ಜತೆಗೆ ಆಮರಣಾಂತ ಉಪವಾಸ ಕೈಗೊಂಡಿರುವ 40 ಮಂದಿಯ ಆರೋಗ್ಯದಲ್ಲಿ ಏರುಪೇರಾದಲ್ಲಿ ಇಡೀ ಸಮಾಜವೇ ಕಾನೂನಿನ ವಿರುದ್ಧ ನಿಲ್ಲುತ್ತದೆ ಎಂದು ತಿಳಿಸಿದರು.
ಈವರೆಗೆ ಹಿಂದೂ ಸಮಾಜ ದೇಶ, ಧರ್ಮದ ಮೇಲೆ ಬಹಳಷ್ಟು ಆಕ್ರಮಣಗಳಾದರೂ ಎಂದಿಗೂ ಕಾನೂನು ಕೈಗೆತ್ತಿಕೊಂಡಿಲ್ಲ. ಸಂವಿಧಾನ ಚೌಕಟ್ಟಿನೊಳಗೆ ಹೋರಾಟಗಳು ನಡೆದಿವೆ. ಅದಕ್ಕಾಗಿ ನ್ಯಾಯ ದೊರೆತಲ್ಲಿ ಅದೇ ವ್ಯವಸ್ಥೆ ಉಳಿಯಲು ಸಾಧ್ಯ. ಸಾತ್ವಿಕರು ಕಾನೂನು ಕೈಗೆತ್ತಿಕೊಂಡಲ್ಲಿ ಸಮಾಜದಲ್ಲಿ ಯಾರೂ ಉಳಿಯಲು ಅಸಾಧ್ಯ. ಪ್ರಳಯವೂ ಆಗಬಹುದು. ಆಮರಣಾಂತ ಉಪವಾಸಕ್ಕೆ ಭೇಟಿ ನೀಡುವುದರಿಂದ ತಪ್ಪಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿತ್ತು. ಆದರೆ ಧರ್ಮದ ಹಾದಿ ಮುಖ್ಯ ಎಂಬುದನ್ನು ನಂಬಿ ಸ್ಥಳಕ್ಕೆ ಭೇಟಿ ನೀಡಿರುವೆ ಎಂದು ತಿಳಿಸಿದರು.
ಹೋರಾಟ ಸಂಪೂರ್ಣಗೊಳಿಸುವ ಉದ್ದೇಶದೊಂದಿಗೆ ಸಮಾಜ ಸ್ಪಂದಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರೆ ಮತ್ತೆ ಹೋರಾಟಕ್ಕೆ ಬಲ ಬರಲಿದೆ. ಹೋರಾಟ ಪೂರ್ಣವಾಗಬೇಕಿದೆ. ದೇಶದಲ್ಲಿ ಕಾನೂನು ಪ್ರಬಲವಾಗಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.