ಕುಂದಾಪುರ, ಜೂ 30 (Daijiworld News/MSP): ಕುಂದಾಪುರದ ಪರೀಕ್ಷಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೋರ್ವರಿಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ ಎನ್ನಲಾಗಿದೆ. ಸೋಮವಾರ ಪರೀಕ್ಷೆ ಬರೆಯುತ್ತಿದ್ದಾಗ ತೀವ್ರ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಈ ವಿದ್ಯಾರ್ಥಿನಿ ಎರಡು ಪರೀಕ್ಷೆಗಳನ್ನು ಬರೆದಿದ್ದಾರೆ.
ಸೋಮವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೊಠಡಿಗೆ ಹಾಜರಾಗುವ ಸಂದರ್ಭ ಥರ್ಮಲ್ ಸ್ಕ್ಯಾನ್ ಮಾಡಲಾಗಿದ್ದು ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಅನಾರೋಗ್ಯ ಕಾಡುತ್ತಿರುವ ಬಗ್ಗೆ ವಿದ್ಯಾರ್ಥಿನಿ ಹೇಳಿಕೊಂಡಾಗ ಆಕೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿತ್ತು.
ಆದರೆ ಆಕೆಗೆ ಅನಾರೋಗ್ಯ ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಿಸಿ ಕೋವಿಡ್-19 ಪರೀಕ್ಷೆ ಮಾಡಲಾಗಿತ್ತು.
ಈ ಹಿಂದೆ ಈ ವಿದ್ಯಾರ್ಥಿನಿಯ ಮನೆಯ ಓರ್ವರು ಮುಂಬಯಿಯಿಂದ ಬಂದು ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದರು ಎನ್ನಲಾಗಿದೆ.
ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೊನಾ ಕಾಣಸಿಕೊಂಡಿರುವುದು ಉಡುಪಿ ಜಿಲ್ಲೆಯಲ್ಲಿ 2ನೇ ಪ್ರಕರಣವಾಗಿದೆ. ಈಗಾಗಲೇ ಹೆಜಮಾಡಿಯಲ್ಲಿ ಒಂದು ಪ್ರಕರಣ ಕಂಡು ಬಂದಿದೆ.