ಕಾಸರಗೋಡು, ಜೂ 30 (DaijiworldNews/SM): ಕೇರಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 98.61 ಫಲಿತಾಂಶ ಲಭ್ಯವಾಗಿದೆ. 1685 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ "ಎ ಪ್ಲಸ್" ಪಡೆದಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 19599 ಮಂದಿ ವಿದ್ಯಾರ್ಥಿಗಳಲ್ಲಿ 19326 ಮಂದಿ ತೇರ್ಗಡೆಹೊಂದಿ, ಉನ್ನತ ಶಿಕ್ಷಣಕ್ಕೆ ಅರ್ಜರಾಗಿದ್ದಾರೆ. ಇವರಲ್ಲಿ 10015 ಮಂದಿ ವಿದ್ಯಾರ್ಥಿನಿಯರು, 9311 ಮಂದಿ ವಿದ್ಯಾರ್ಥಿಗಳು ಆಗಿದ್ದಾರೆ. ಜಿಲ್ಲೆಯ ಸರಕಾರಿ ಶಾಲೆಗಳಿಂದ 10780 ಮಂದಿ, ಅನುದಾನಿತ ಶಾಲೆಗಳಿಂದ 6603 ಮಂದಿ, ಅನುದಾನ ರಹಿತ ಶಾಲೆಗಳಿಂದ 1943 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ.
1685 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ "ಎ ಪ್ಲಸ್ " ಶ್ರೇಣಿ ಪಡೆದಿದ್ದಾರೆ. ಅತ್ಯಧಿಕ ಪ್ರಮಾಣದಲ್ಲಿ ಎ ಪ್ಲಸ್ ಪಡೆದವರು ಸರಕಾರಿ ಶಾಲೆಗಳ ವಿದ್ಯಾರ್ಥಿಗಳು. ಎ ಪ್ಲಸ್ ಪಡೆದವರಲ್ಲಿ 929 ಮಂದಿ ಸರಕಾರಿ ಶಾಲೆಗಳಿಂದ, ಅನುದಾನಿತಶಾಲೆಗಳಿಂದ 633 ಮಂದಿ, ಅನುದಾನ ರಹಿತ ಶಾಲೆಗಳಿಂದ 123 ಮಂದಿ ವಿದ್ಯಾರ್ಥಿಗಳಾಗಿದ್ದಾರೆ.
ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಗೆ ಶೇ 99.24 ಫಲಿತಾಂಶ ಲಭಿಸಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಗೆ ಶೇ 98.08 ಫಲಿತಾಂಶ ಬಂದಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 10736 ಮಂದಿಯಲ್ಲಿ 10530 ತೇರ್ಗಡೆಹೊಂದಿದ್ದಾರೆ. ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 8863 ಮಂದಿಯಲ್ಲಿ 8796 ಮಂದಿ ಪಾಸಾಗಿದ್ದಾರೆ. ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 1113 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 572 ಮಂದಿ ಎಲ್ಲ ವಿಷಯಗಳಲ್ಲಿ ಎ ಶ್ರೇಣಿ ಗಳಿಸಿದ್ದಾರೆ.