ಮಂಗಳೂರು, ಜು 01 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿರುವ ನಡುವೆಯೇ ಮಾರಕ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ.
ಮಂಗಳೂರಿನ ಬೆಂಗ್ರೆ ನಿವಾಸಿಯಾಗಿದ್ದ, ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ 78 ವರ್ಷದ ಸೋಂಕು ಪೀಡಿದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಜು.1ರ ಬುಧವಾರ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಗುಪ್ತಗಾಮಿನಿಯಂತೆ ಹರಡುತ್ತಿದೆಯೇ ಅನ್ನುವ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಪೂರಕವೆಂಬಂತೆ ಕಳೆದ ಎರಡು - ಮೂರು ದಿನಗಳಿಂದ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಈ ನಡುವೆ ಕೊರೊನಾ ನಿಯಂತ್ರಣದಲ್ಲಿ ತೊಡಗಿರುವ ವೈದ್ಯರು ಹಾಗೂ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಕೊರೊನಾ ನಿಯಂತ್ರಣಕ್ಕೆ ಮತ್ತಷ್ಟು ಸವಾಲನ್ನು ಒಡ್ಡಿದೆ.