ಬೈಂದೂರು, ಜು 01 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮೂರನೇ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಂಗಳವಾರ ಸಂಜೆ ಉಪ್ಪುಂದದ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವರಿಗೆ ಕೊರೊನಾ ದೃಢಪಟ್ಟಿದೆ ಎನ್ನಲಾಗಿದೆ. ಬೈಂದೂರಿನ ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶನಿವಾರದ ತನಕ ಎರಡು ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿನಿಗೆ ಶನಿವಾರ ಸಂಜೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸೋಮವಾರ ಪರೀಕ್ಷೆ ಇದ್ದ ಕಾರಣ ಪ್ರಾಂಶುಪಾಲರಿಗೆ ಈ ವಿಚಾರ ತಿಳಿಸಿದ್ದರು. ಸೋಮವಾರ ಪರೀಕ್ಷೆಗೆ ಈ ವಿದ್ಯಾರ್ಥಿನಿ ಹಾಜರಾಗಿರಲಿಲ್ಲ. ಸೋಮವಾರ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಸಂಜೆ ವರದಿ ಬಂದಿದ್ದು ಪಾಸಿಟಿವ್ ದೃಢ ಪಟ್ಟಿದೆ.
ಈ ವಿದ್ಯಾರ್ಥಿನಿಗೆ ಹೇಗೆ ಕೊರೋನಾ ಬಂತು ಎನ್ನುವುದು ನಿಗೂಢವಾಗಿದೆ. ಆದರೆ ಕೆಲವು ದಿನಗಳ ಹಿಂದೆ ಇವರ ಮನೆಯ ಆಸುಪಾಸಿನಲ್ಲಿ ಮಹಾರಾಷ್ಟ್ರದಿಂದ ಬಂದವರಿದ್ದರು ಎನ್ನಲಾಗಿದೆ.
ಮಂಗಳವಾರ ಸಂಜೆ ತಾನೆ ಕುಂದಾಪುರದ ಪರೀಕ್ಷಾ ಕೇಂದ್ರದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಇದೀಗ ಬೈಂದೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಗೂ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.