ಉಡುಪಿ, ಜು 01(DaijiworldNews/PY): ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೊನಾ ಸಮುದಾಯಕ್ಕೆ ಹರಡಿರುವಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಈ ರೋಗ ಸಮುದಾಯಕ್ಕೆ ಹೋಗದಂತೆ ತಡೆಯಲು ಮನೆಮನೆ ಸರ್ವೆ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಮಹಾರಾಷ್ಟ್ರದಿಂದ ಪ್ರತಿನಿತ್ಯ 250 ರಿಂದ 300 ಮಂದಿ ರೈಲು ಹಾಗೂ ಇತರ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಈ ಪೈಕಿ ವಿಶೇಷ ವರ್ಗ ಹಾಗೂ ರೋಗದ ಲಕ್ಷಣ ಇರುವವರನ್ನು ಮಾತ್ರವೇ ನಾವು ಪರೀಕ್ಷೆ ಮಾಡುತ್ತಿದ್ದೇವೆ. ಈ ಕಾರಣದಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ ಎಂದು ತಿಳಿಸಿದರು.
ಹೊಸ ಮಾರ್ಗಸೂಚಿ ಬಂದ ಬಳಿಕ ಅವರನ್ನು ಪರೀಕ್ಷೆ ಮಾಡುತ್ತಿಲ್ಲ. ಸದ್ಯ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಿದಾಗ ಸೋಂಕು ಕಂಡು ಬಂದಿದ್ದು, ಜಿಲಗಲೆಯಲ್ಲಿರುವ ಒಟ್ಟು ಪ್ರಕರಣಗಳ ಪೈಕಿ ಪ್ರತಿನಿತ್ಯ ಆರು ಕೊರೊನಾ ಪ್ರಕರಣಗಳು ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.
ಬೆಂಗಳೂರಿಗೆ ಹೋಗಿ ವಾಪಾಸ್ಸಾದ ವೈದ್ಯರು, ಬಸ್ ಚಾಲಕರು ಸೇರಿದಂತೆ ಕೊರೊನಾ ವಾರಿಯರ್ಸ್ ಹಾಗೂ ಜವಳಿ ವ್ಯಾಪಾರಸ್ಥರಿಗೆ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಉಸಿರಾಟ, ಜ್ವರ, ಶೀತ ಕೆಮ್ಮು ಇರುವ ಜನರನ್ನು ಮಾತ್ರ ಪತ್ತೆ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ. ಮುಂಜಾಗ್ರತೆ ವಹಿಸಬೇಕು ಎಂದರು.