ಬಂಟ್ವಾಳ, ಏ 08 : ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಸಾಮಾನ್ಯ ಆದರೆ ಬಂಟ್ವಾಳದಲ್ಲಿ ಸ್ವಾರಸ್ಯಕರ ಪಕ್ಷಾಂತರ ಘಟನೆ ವರದಿಯಾಗಿ಼ದೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಕಾರ್ಯದರ್ಶಿ ಸುಂದರ ದೇವಿನಗರ-ಅನಂತಾಡಿ ಅವರು ಏ . 07ರ ಶನಿವಾರ ಬೆಳಿಗ್ಗೆ ಬಿ.ಸಿ ರೋಡಿನ ಬಿಜೆಪಿ ಕಚೇರಿಗೆ ಬಂದು ಪಕ್ಷದ ನಾಯಕರ ಸಮ್ಮುಖದಲ್ಲಿ ಧ್ವಜ ಸ್ವೀಕರಿಸಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಎಚ್ಚೆತ್ತು ಸಂಜೆಯಾಗುತ್ತಲೇ ಅವರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಬೆಳಗ್ಗೆ ಬಿಜೆಪಿ ಸಂಜೆ ಕಾಂಗ್ರೆಸ್ ಎಂದು ಸುಂದರ ದೇವಿನಗರ ಪಕ್ಷಾಂತರ ವೃತ್ತಾಂತ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿತ್ತು.
ಶನಿವಾರ ಬೆಳಿಗ್ಗೆ ಬಿ.ಸಿ ರೋಡಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡು ಸುದ್ದಿಯಾಗುವಷ್ಟರಲ್ಲಿ ಸಂಜೆ ಮಾಣಿ ವಲಯ ಕಾಂಗ್ರೆಸ್ ವತಿಯಿಂದ ನಡೆದ ಬೂತ್ ಮಟ್ಟದ ಸಭೆಯಲ್ಲಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮೂಲಕ ಸ್ವಾರಸ್ಯಕರ ವಿದ್ಯಾಮಾನಕ್ಕೆ ಸಾಕ್ಷಿಯಾದರು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟೀಕರಣ ಬರೆದುಕೊಂಡಿರುವ ಸುಂದರ ದೇವಿನಗರ ಅವರು “ನನ್ನ ಕಾಲು ನೋವು ಇದ್ದ ಕಾರಣ ನಾನು ಆಸ್ಪತ್ರೆಗೆ ಹೋಗಲು ಬಿ ಸಿ ರೋಡಿಗೆ ಬಂದಿದ್ದ ವೇಳೆ ಅನಂತಾಡಿ ಗ್ರಾಮದ ಬಿಜೆಪಿ ಮುಖಂಡ ಸನತ್ ಶೆಟ್ಟಿ ಎಂಬವರು ನನ್ನನ್ನು ಮೋಸ ಮಾಡಿ ಬಿಜೆಪಿ ಕಚೇರಿಗೆ ಕರೆದೊಯ್ದು ರಾಜೇಶ್ ನಾಯ್ಕ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಶಾಲು ಹೊದಿಸಿ ನನ್ನನ್ನು ಬಿಜೆಪಿಗೆ ಸೇರಿಸಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡಿರುತ್ತಾರೆ. ನಾನು ಈ ಬಗ್ಗೆ ನಾನು ನನ್ನ ವಾರ್ಡ್ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ತಿಳಿಸಿದ್ದು, ಅದೇ ದಿನ ನಡೆದ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿರುತ್ತೇನೆ. ನಾನು ಎಂದೆಂದಿಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.