ಮಂಗಳೂರು, ಜು.01 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದು, ಆ ಮೂಲಕ ಒಂದೇ ದಿನ ಮತ್ತೆ ಮೂವರು ಸೋಂಕಿಗೆ ಬಲಿಯಾದಂತಾಗಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೧೭ಕ್ಕೆ ಏರಿಕೆಯಾಗಿದೆ.
ಭಟ್ಕಳ ನಿವಾಸಿ 76 ವರ್ಷದ ವ್ಯಕ್ತಿ ಸಾವು:
ಭಟ್ಕಳ ನಿವಾಸಿ 76 ವರ್ಷದ ವ್ಯಕ್ತಿ ಮೃತಪಟ್ಟವರಾಗಿದ್ದಾರೆ. ಇವರು ಅಧಿಕ ರಕ್ತದೊತ್ತಡ, ಶ್ವಾಸಕೋಶದ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ.
72 ವರ್ಷದ ವ್ಯಕ್ತಿ ಸಾವು:
ಇನ್ನು ಈ ನಡುವೆ ಮಂಗಳೂರು ನಿವಾಸಿ 72 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಅವರು ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ಪಿರೇಶನ್, ನ್ಯುಮೋನಿಯಾ, ಮೆದುಳಿನ ಉರಿಯೂತ ಮತ್ತು ಮಲೇರಿಯಾದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಜೂನ್ ೩೦ರಂದು ವೆನ್ಲಾಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಇದೀಗ ಅವರು ಮೃತಪಟ್ಟಿದ್ದಾರೆ.
31 ವರ್ಷದ ಉತ್ತರ ಕನ್ನಡ ಮೂಲದ ವ್ಯಕ್ತಿ ಸಾವು:
ಇನ್ನು ಉತ್ತರ ಕನ್ನಡ ಜಿಲ್ಲೆಯ 31 ವರ್ಷದ ಯುವಕ ಸೋಂಕಿಗೆ ಬಲಿಯಾಗಿದ್ದಾನೆ. ಈತನಲ್ಲಿ ಸಾರಿ ಪ್ರಕರಣದಿಂದ ಸೋಂಕು ದೃಢಪಟ್ಟಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್ ೩೦ರಂದು ಯುವಕ ಮೃತಪಟ್ಟಿದ್ದ. ಆದರೆ, ಇಂದು ಈತನ ಗಂಟಲದ್ರವ ಮಾದರಿ ಲಭ್ಯವಾಗಿದ್ದು, ವರದಿ ಪಾಸಿಟಿವ್ ಕಂಡುಬಂದಿದೆ.