ಕಾಸರಗೋಡು, ಜು.01 (DaijiworldNews/SM): ಗಡಿಯ ರಸ್ತೆಗಳನ್ನು ಮುಚ್ಚುವ ಬಗ್ಗೆ ಹೊಸದಾಗಿ ಜಿಲ್ಲಾಡಳಿತ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಲಾಕ್ ಡೌನ್ ಆರಂಭದಲ್ಲಿ ಬಂದ್ ಮಾಡಿದ್ದ ರಸ್ತೆಗಳು ಮಾತ್ರ, ಈಗಲೂ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಗಡಿ ರಸ್ತೆ ಮುಚ್ಚಲಾಗಿವೆ ಎಂಬ ಮಾಧ್ಯಮಗಳ ವರದಿ ಸರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಸೋಂಕು ಪತ್ತೆಯಾದ ಯುವಕ ಅಕ್ರಮವಾಗಿ ಜಿಲ್ಲೆಗೆ ತಲುಪಿದ್ದು, ಈತ ಒಳ ರಸ್ತೆಯಾಗಿ ಜಿಲ್ಲೆಗೆ ತಲುಪಿದ್ದು, ಈತ ಬಂದ ರಸ್ತೆ ಬಂದ್ ಮಾಡಿರುವುದು ಜಿಲ್ಲಾಡಳಿತದ ದಾಖಲೆಯಲ್ಲಿ ತಿಳಿಸುತ್ತಿದೆ. ಇದರಿಂದ ಈ ವಲಯಗಳಲ್ಲಿ ಪೊಲೀಸ್ ತಪಾಸಣೆ ಹಾಗೂ ವೈದ್ಯರ ಸೇವೆ ಒದಗಿಸಲಾಗಿದೆ. ಇದರ ಜೊತೆಗೆ ಗಡಿಯ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆಗೆ ಪೊಲೀಸರನ್ನು ನಿಯೋಜಿಸಲಾಗುವುದು. ವೈದ್ಯಕೀಯ ಸಿಬ್ಬಂದಿಗಳನ್ನು ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.
ಇನ್ನು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಪಾಲನೆ ಮಾಡದವರ ಬಗ್ಗೆ ನಿಗಾ ಇರಿಸಲು ವಿಶೇಷ ದಳ ರಚಿಸಲಾಗಿದೆ. ಮೊದಲ ಹಂತದಲ್ಲಿ ಇಂತಹವರಿಗೆ ತಿಳುವಳಿಕೆ ನೀಡಲಾಗುವುದು. ಮುಂದೆ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ರಸ್ತೆ ಬದಿ ಗೂಡಂಗಡಿಗಳಲ್ಲಿ ಆಹಾರ ಸೇವಿಸಲು ಅನುಮತಿ ಇಲ್ಲ. ಪಾರ್ಸೆಲ್ ಗೆ ಮಾತ್ರ ಅವಕಾಶ. ಆದರೆ ನಿಬಂಧನೆಗಳನ್ನು ಗೂಡಂಗಡಿ ಮಾಲಕರು ಕಡ್ಡಾಯವಾಗಿ ಪಾಲಿಸಬೇಕು. ಅಂತರ ಜಿಲ್ಲೆ ಬಸ್ಸು ಸಂಚಾರ ಸ್ಥಗಿತಗೊಳಿಸಿದೆ. ಹತ್ತಿರದ ಜಿಲ್ಲೆಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬ್ಯೂಟಿ ಪಾರ್ಲರ್ ಗಳಿಗೆ ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.