ಉಳ್ಳಾಲ, ಏ 08 : ಸಚಿವ ಯು.ಟಿ ಖಾದರ್ ಅವರಿಗೆ ಅವರ ಸ್ವ ಪಕ್ಷೀಯರೇ ಛೀಮಾರಿ ಹಾಕಿದ ಘಟನೆ ಅವರ ಸ್ವಕ್ಷೇತ್ರ ಉಳ್ಳಾಲದಲ್ಲಿ ಏ 7 ರ ಶನಿವಾರ ಸಂಜೆ ನಡೆದಿದೆ. ಎಸ್ ಕೆಎಸ್ಸೆಸ್ಸೆಫ್ ಸಮಸ್ತ ಸಮ್ಮೇಳನ ನಿನ್ನೆ ಸಂಜೆ ಉಳ್ಳಾಲದಲ್ಲಿ ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಮುಸ್ಲಿಂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು , ಇದೇ ಸಮ್ಮೇಳನದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸಚಿವ ಖಾದರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯಿಂದ ಇಳಿದು ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಸುತ್ತುವರಿದ ಯುವಕರ ಗುಂಪೊಂದು ಖಾದರ್ ಅವರಿಗೆ ಘೇರಾವ್ ಹಾಕಿದರು. "ನೀವು ಈ ಸಮ್ಮೇಳನ ನಡೆಸಲು ಪರ್ಮಿಷನ್ ನೀಡದಂತೆ ಇಲಾಖೆಗೆ ಒತ್ತಡ ಹಾಕಿದ್ದೀರಿ ಎಂದು ತಿಳಿದಿದೆ . ಈಗ ನೀವು ಸಮ್ಮೇಳನಕ್ಕೆ ಯಾಕೆ ಬಂದಿದ್ದು ಎಂದು ಖಾದರ್ ಅವರನ್ನು ನೇರವಾಗಿ ಯುವಕರ ಗುಂಪೊಂದು ತರಾಟೆಗೆ ತೆಗೆದುಕೊಂಡಿತು. ಆಗ ಯುವಕರನ್ನು ತಮ್ಮ ಮಾತಿನಿಂದಲೇ ಸಮಾಧಾನಿಸಲು ಯತ್ನಿಸಿದ ಸಚಿವ ಖಾದರ್ ಬಳಿಕ ಹೆಚ್ಚು ಮಾತನಾಡದೆ ಸ್ಥಳದಿಂದ ತೆರಳಿದರು.