ಉಡುಪಿ, ಏ 08: ಆಸ್ಟ್ರೇಲಿಯಾ ದ ಗೋಲ್ಡ್ ಕೋಸ್ಟ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕುಂದಾಪುರದ ಗುರುರಾಜ್ ಪೂಜಾರಿ ಅವರಿಗೆ ಕ್ರೀಡಾ ಇಲಾಖೆಯಿಂದ 25 ಲಕ್ಷ ನಗದು ಮತ್ತು ಸರ್ಕಾರಿ ನೌಕರಿಯನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದಿದ್ದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಇದೀಗ ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಮನ್ವೆಲ್ತ್ ಗೇಮ್ಸ್ ಗೆ ತೆರಳುವ ಮುನ್ನವೇ ಪ್ರಶಸ್ತಿ ಬಗ್ಗೆ ಕ್ರೀಡಾನೀತಿಯಲ್ಲಿ ಉಲ್ಲೇಖವಾಗಿದೆ. ಇದು ಈಗ ಮಾಡುತ್ತಿರುವ ಘೋಷಣೆಯಲ್ಲ ಎಂದೂ ಕೂಡ ಸಚಿವರು ಬಹುಮಾನ ಘೋಷಣೆ ಮಾಡುವ ಸಂದರ್ಭದಲ್ಲಿಯೇ ಸ್ಪಷ್ಟೀಕರಣ ನೀಡಿದ್ದರು.ಆದರೆ ಇದೀಗ ಈ ಹೇಳಿಕೆಯೇ ಅವರಿಗೆ ತೊಂದರೆ ತಂದಿಟ್ಟಿದೆ. ಈ ಬಗ್ಗೆ ಮಧ್ವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಚುನಾವಣಾ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಸರಿಯಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹೇಳಿದ್ದಾರೆ. ಕ್ರೀಡಾ ನೀತಿಯ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಅದ್ದರಿಂದ ಮತದಾನ ಸಂದರ್ಭದಲ್ಲಿ ಇಂತಹ ಹೇಳಿಕೆಗಳಿಂದ ಮತದಾರರನ್ನು ಓಲೈಸುವಂತಾಗುತ್ತದೆ ಅಲ್ಲದೇ ಆಮಿಷ ಒಡ್ಡುವಂತಾಗುತ್ತದೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ಉಡುಪಿ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.