ಕುಂದಾಪುರ, ಜು 02 (Daijiworld News/MSP): ಕುಂದಾಪುರದಲ್ಲಿ ಮತ್ತೆ ಕಳ್ಳರು ತಮ್ಮ ಅಟ್ಟಹಾಸ ಆರಂಭಿಸಿದ್ದಾರೆ. ಇತ್ತೀಚೆಗೆ ದೇವಸ್ಥಾನಗಳ ಸರಣಿ ಕಳ್ಳತನದ ಬಳಿಕ ಸ್ಪಲ್ಪ ವಿರಾಮ ಪಡೆದಿದ್ದ ದೇವಸ್ಥಾನ ಕಳ್ಳರು ಜು.1ರ ರಾತ್ರಿ ಕೋಟೇಶ್ವರ ಸಮೀಪದ ಕಟ್ಕರೆಯ ಪ್ರಸಿದ್ಧ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನಕ್ಕೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿದ್ದಾರೆ.
ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಪರಶು ಕಳವುಗೈದಿದ್ದಾರೆ. ಬಾಗಿಲಿಗೆ ಅಳವಡಿಸಿದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿದ್ದಾರೆ. ಸಿಸಿ ಟಿವಿ ಡಿವಿಆರ್ ಹಾಗೂ ಹಾರ್ಡ್ ಡಿಸ್ಕ್ ಕೂಡಾ ಕದ್ದಿದ್ದಾರೆ. ಕಳವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ 25 ಸಾವಿರ ಆಗಿದ್ದು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಷ್ಟವಾಗಿದ್ದು ಇನ್ನೂ ದೊಡ್ಡ ಮಟ್ಟದಲ್ಲಿ ಕಳ್ಳತನ ಆಗುವುದರಲ್ಲಿತ್ತು. ಆದರೆ ಸೈನ್ ಇನ್ ಸೆಕ್ಯೂರಿಟಿಯವರ ಸೇಫ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಸಮಯ ಪ್ರಜ್ಞೆಯಿಂದ ಈ ದೊಡ್ಡ ಪ್ರಮಾಣದ ಕಳ್ಳತನ ವಿಫಲವಾಗಿದೆ.
ಕಳೆದ ಆರು ವರ್ಷಗಳ ಹಿಂದೆಯಷ್ಟೇ 50ಲಕ್ಷಕ್ಕೂ ಅಧಿಕ ನಗ-ನಗದು ಕಳವಾಗಿತ್ತು. ಸೈನ್ ಇನ್ ಸೆಕ್ಯೂರಿಟಿಯವರ ಸೇಫ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಸಮಯ ಪ್ರಜ್ಞೆಯಿಂದ ಬಾರೀ ಕಳ್ಳತನ ತಪ್ಪಿದಂತಾಗಿದೆ.
ತಕ್ಷಣ ಧಾವಿಸಿದ ಪೊಲೀಸರು: ಕಾಲ್ಕಿತ್ತ ಕಳ್ಳರುಇಲ್ಲಿ ಸಿಸಿ ಟಿವಿ ಅಳವಡಿಸಿದ್ದು ಸೇಫ್ ಕುಂದಾಪುರ ಪ್ರಾಜೆಕ್ಟ್ ಸೈನ್ ಇನ್ ಸೆಕ್ಯೂರಿಟಿ ಲೈವ್ ಕ್ಯಾಮರಾ ಕಣ್ಗಾವಲು ಇದ್ದಿತ್ತು. ಸುಮಾರು 1.27 ರ ಹೊತ್ತಿಗೆ ಸಿಸಿ ಕ್ಯಾಮೆರಾ ಕಟ್ ಆಗಿದ್ದು ಇದನ್ನು ಗಮನಿಸಿದ ಸಿಸಿ ಕ್ಯಾಮೆರಾ ಕಣ್ಗಾವಲು ನಡೆಸುತ್ತಿದ್ದವರು ಪೋಲೀಸ್ ಠಾಣೆಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸ್ ಠಾಣೆಯಿಂದ ಬೀಟ್ ಸಿಬ್ಬಂದಿಗೆ ಮಾಹಿತಿಗೆ ಮಾಹಿತಿ ನೀಡಲಾಗಿತ್ತು. ಕೋಟೇಶ್ವರದಲ್ಲಿ ಬೀಟ್ನಲ್ಲಿದ್ದ ಸಿಬ್ಬಂದಿಗಳು ತಕ್ಷಣ ದೇವಸ್ಥಾನದ ಬಳಿ ಬಂದಾಗ ಮೂರು ಜನ ದೇವಸ್ಥಾನದಿಂದ ಓಡಿ ಹೋಗಿದ್ದಾರೆ.
ದೇವಸ್ಥಾನ ಪ್ರವೇಶಕ್ಕೂ ಮೊದಲು ಕಳ್ಳರು ಸಿಸಿ ಟಿವಿ ವಯರ್ ಗಳನ್ನು ನಾಶಪಡಿಸಿದ್ದಾರೆ. ದೇವಸ್ಥಾನದಲ್ಲಿ 26 ಲಕ್ಷದ ಬೆಳ್ಳಿ ಮತ್ತು ಇನ್ನಿತರೆ 5 ಲಕ್ಷದ ಮೌಲ್ಯದ ವಸ್ತುಗಳಿದ್ದು ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ. ಅಲ್ಲದೆ ಇದೆ ದೇವಸ್ಥಾನ 2013 ರಲ್ಲಿ ಕಳುವಾಗಿದ್ದು ಸರಿಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿತ್ತು.
ಸ್ಥಳಕ್ಕೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಕುಂದಾಪುರ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.