ಮಂಗಳೂರು, ಜು 02(DaijiworldNews/PY): ಜೂನ್ 27ರಂದು ರದ್ದಾಗಿದ್ದ ಕುವೈಟ್-ಮಂಗಳೂರು ವಿಮಾನ ಜುಲೈ 4ಕ್ಕೆ ಮಂಗಳೂರಿಗೆ ಬಂದಿಳಿಯಲಿದೆ.
ಸಾಂದರ್ಭಿಕ ಚಿತ್ರ
ಜೂನ್ 27ರಂದು ರದ್ದಾಗಿದ್ದ ಕುವೈಟ್-ಮಂಗಳೂರು ವಿಮಾನ ರದ್ದಾಗಿದ್ದು, ಇದರಿಂದ 164 ಪ್ರಯಾಣಿಕರು ತಾಯ್ನಾಡಿಗೆ ಮರಳದೇ ಸಂಕಷ್ಟದಲ್ಲಿದ್ದರು. ಈ ಬಗ್ಗೆ ದೈಜಿವರ್ಲ್ಡ್ ವರದಿ ಮಾಡಿದ್ದು, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ಪಂದನೆ ನೀಡಿದ್ದಾರೆ. ಇವರಿಬ್ಬರ ಸತತ ಪ್ರಯತ್ನಕ್ಕೆ ದೊರಕಿದ ಪ್ರತಿಫಲದಿಂದಾಗಿ 164 ಪ್ರಯಾಣಿಕರು ಜುಲೈ 4ರಂದು ತಾಯ್ನಾಡಿಗೆ ಮರಳಲಿದ್ದಾರೆ.
ಈ ಬಗ್ಗೆ ದೈಜಿವರ್ಲ್ಡ್ಗೆ ಮಾಹಿತಿ ನೀಡಿರುವ ಕ್ಯಾ.ಗಣೇಶ್ ಕಾರ್ಣಿಕ್ ಅವರು, ಈ ಹಿಂದೆ ನಾನು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಅಲ್ಲಿನ ಜನರು ಸಂಕಷ್ಟಕ್ಕೊಳಗಾಗಿದ್ದು, ತಮ್ಮ ಕೆಲಸವನ್ನು ಕಳೆದುಕೊಂಡಿದ್ಧಾರೆ. ಹೊರ ದೇಶದಲ್ಲಿರುವಾಗ ಅವರ ಆತಂಕ, ಸಮಸ್ಯೆ ನಮ್ಮ ದೇಶದಲ್ಲಿರುವುದಕ್ಕಿಂತ ಗಂಭೀರವಾದದ್ದು. ಈ ವಿಚಾರವಾಗಿ ನಾನು ಕೇಂದ್ರ ಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಮಾತನಾಡಿದ್ದೆ. ಅವರೂ ಕೂಡಾ ಈ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ಒತ್ತಾಯಿಸಿದ್ಧಾರೆ. ರಾಜ್ಯಾಧ್ಯಕ್ಷರು ಕೂಡಾ ಈ ವಿಚಾರವಾಗಿ ಕ್ರಮಕೈಗೊಂಡಿದ್ದು, ಎಲ್ಲರೂ ಸ್ಪಂದಿಸಿದ್ದಾರೆ. ನೋಡೆಲ್ ಅಧಿಕಾರಿ ಮೀನಾ ನಾಗರಾಜ್ ಅವರು ಕೂಡಾ ಸ್ಪಂದಿಸಿದ್ದಾರೆ. ಜನಪ್ರತಿನಿಧಿಗಳಾಗಿ ಕೆಲಸ ಮಾಡುವುದಕ್ಕೆ ಜನರು ಅವಕಾಶ ಕೊಡುತ್ತಾರೆ ಅದು ಜನರ ಸಮಸ್ಯೆಗಾಗಿ ಸ್ಪಂದಿಸಲಿಕ್ಕಿರುವಂತಹ ಅವಕಾಶ ಎಂದು ಹೇಳಿದ್ದಾರೆ.