ಮಂಗಳೂರು, ಜು. 02 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಕೇರಳದ ಗಡಿಯನ್ನು ಬಂದ್ ಮಾಡಲಾಗಿದೆ ಎಂಬ ಈ ವದಂತಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ವದಂತಿಯ ಬಗ್ಗೆ ಯಾರೂ ಕೂಡಾ ಗಮನ ಹರಿಸಬಾರದು. ಆ ರೀತಿಯ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಏನೇ ಇದ್ದರೂ ಕೂಡಾ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಯಾರೂ ಗೊಂದಲ ಹುಟ್ಟು ಹಾಕುವ ಸುಳ್ಳು ಸುದ್ದಿ ಹರಡದಿರಿ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಆದೇಶ ರಾಜ್ಯ ಸರಕಾರದಿಂದಾಗುವ ಪ್ರಕ್ರಿಯೆಯಾಗಿದ್ದು ಪ್ರಸ್ತುತ ಇರುವ ನಿಯಮಗಳಷ್ಟೇ ಪಾಲನೆಯಾಗಲಿದೆ. ಜುಲೈ 5ರಿಂದ ನಾಲ್ಕು ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆ ದಿನ ಅಗತ್ಯ ಸೇವೆಗಳಿಗಷ್ಟೇ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಯಾವುದೇ ಬದಲಾವಣೆಗಳಿದ್ದಲ್ಲಿ ಸಾರ್ವಜನಿಕ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಕಾಸರಗೋಡು ಜಿಲ್ಲಾಡಳಿತ ಕೇರಳ ಗಡಿಯನ್ನು ಸಂಪರ್ಕಿಸುವ ರಾಜ್ಯದ ಎಲ್ಲ ರಸ್ತೆಗಳನ್ನು ಬಂದ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಗಡಿಯ ರಸ್ತೆಗಳನ್ನು ಮುಚ್ಚುವ ಬಗ್ಗೆ ಹೊಸದಾಗಿ ಜಿಲ್ಲಾಡಳಿತ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಲಾಕ್ ಡೌನ್ ಆರಂಭದಲ್ಲಿ ಬಂದ್ ಮಾಡಿದ್ದ ರಸ್ತೆಗಳು ಮಾತ್ರ, ಈಗಲೂ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದರು.