ಉಳ್ಳಾಲ, ಜು 02 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟ ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಉಳ್ಳಾಲ ಪರಿಸರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಗುರುವಾರ ಉಳ್ಳಾಲ ಸುತ್ತಮುತ್ತಲಿನ ಪ್ರದೇಶದಲ್ಲಿ 2 ವರ್ಷ 3 ವರ್ಷದ ಮಕ್ಕಳು ಸೇರಿ 28 ಮಂದಿಗೆ ಸೋಂಕು ಹರಡಿದೆ.
ಸೋಂಕಿತರಲ್ಲಿ ಅನಿಲ ಕಂಪೌಂಡ್ ಉಳ್ಳಾಲದ 6 ಮತ್ತು 3 ರ ಹರೆಯದ ಬಾಲಕರು, ಮುಕ್ಕಚ್ಚೇರಿಯ 29ರ ಮಹಿಳೆ, 39 ವರ್ಷದ ಗಂಡಸು, ಆಝಾದನಗರ ಉಳ್ಳಾಲದ 44 ಹಾಗೂ 55ರ ಗಂಡಸು, 36, 50, 30ರ ಮಹಿಳೆಯರು, 13 ಹಾಗೂ 8ರ ಬಾಲಕರು, 12 ವರ್ಷದ ಬಾಲಕಿ, 2 ವರ್ಷದ ಹರೆಯದ ಮಗು, ಉಳ್ಳಾಲ ಪಟೇಲ ಕಂಪೌಂಡಿನ 51ರ ಹರೆಯದ ಗಂಡಸು, ಹರೇಕಳ ಪಂಚಾಯತ್ ಬಳಿಯ 26 ರ ಯುವಕ , ಅಕ್ಕರೆಕೆರೆ ಉಳ್ಳಾಲದ 46 ವರ್ಷದ ಗಂಡಸು , ಮುನ್ನೂರು ಸಂತೋಷನಗರದ 52 ರ ಗಂಡಸು, ತೊಕ್ಕೊಟ್ಟು ಪರಿಸರದ 13ವರ್ಷದ ಬಾಲಕಿ , ಮೇಲಂಗಡಿ ಉಳ್ಳಾಲದ 32 ವರ್ಷದ ಗಂಡಸು, ಉಳ್ಳಾಲ ಹೈದರಾಲಿ ರಸ್ತೆಯ 30 ವರ್ಷದ ಗಂಡಸು, ಮುಕ್ಕಚ್ಚೇರಿ ರಸ್ತೆಯ 48 ವರ್ಷದ ಗಂಡಸು, ಸುಲ್ತಾನ್ ನಗರ ಉಳ್ಳಾಲದ 48ವರ್ಷದ ಗಂಡಸು, ಉಳ್ಳಾಲ ಪದ್ಮಶಾಲಿ ಕಂಪೌಂಡಿನ 44 ವರ್ಷದ ಮಹಿಳೆ , ಮೊಗವೀರಪಟ್ನ ಉಳ್ಳಾಲದ 54 ವರ್ಷದ ಗಂಡಸು , ಸೋಮೇಶ್ವರ ಉಳ್ಳಾಲದ 65 ವರ್ಷದ ಗಂಡಸು, ಅನಿಲಕಂಪೌಂಡ್ ಉಳ್ಳಾಲದ 29ವರ್ಷದ ಗಂಡಸು, ಕಲ್ಲಾಪು ತೊಕ್ಕೊಟ್ಟು ವಿನ 27ವರ್ಷದ ಮಹಿಳೆ ಸೇರಿ ಸೋಮೇಶ್ವರ, ಮುನ್ನೂರು, ಹರೇಕಳದಲ್ಲಿ ಮೂವರು ಸೇರಿ ಒಟ್ಟು 28 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.
ಸ್ವಯಂ ಪ್ರೇರಿತ ಬಂದ್ :
ಕೋವಿಡ್ ಸೋಂಕು ಉಳ್ಳಾಲದಾದ್ಯಂತ ಮುಂದುವರಿದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಉಳ್ಳಾಲ ಜಂಕ್ಷನ್, ಕೋಟೆಪುರ ಅಳೇಕಲ, ಮಂಚಿಲ, ಮಾರ್ಗತಲೆ, ಹಳೆಕೋಟೆ ಪ್ರದೇಶಗಳಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸ್ವಯಂ ಪ್ರೇರಿತವಾಗಿ ಬಂದ್ ನಡೆಸಿದರು.
ತೊಕ್ಕೊಟ್ಟು, ಉಳ್ಳಾಲ ಭಾಗಗಳಲ್ಲಿ ರಿಕ್ಷಾ ಚಾಲಕರು ಮಧ್ಯಾಹ್ನ 12.30ರ ವರೆಗೆ ಮಾತ್ರ ಕಾರ್ಯನಿರ್ವಹಿಸಿ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದಾರೆ.