ಮಂಗಳೂರು, ಜು 02 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಜನತೆ ಅದರಲ್ಲೂ ಮಂಗಳೂರು ನಗರದ ಜನತೆ ಎಚ್ಚರವಾಗಿರಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಜನರು ಕೊರೊನಾ ಸೋಂಕಿನ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಕೊರೊನಾಗಿಂತಲೂ ಡೆಂಗ್ಯೂ, ಹೆಚ್-೧ಎನ್-೧ ಮಾರಕವಾಗಿತ್ತು. ಈ ಹಿನ್ನೆಲೆಯಲ್ಲಿ ಜನತೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕನ್ನು ಮಾತ್ರವೇ ದ್ವೇಷಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಜನರು ಸೋಂಕಿತರನ್ನು ದ್ವೇಷಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಮನೆಯಿಂದ ಅನವಶ್ಯಕವಾಗಿ ಯಾರೂ ಕೂಡ ಹೊರಗಡೆಬರದಿರುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ತಮ್ಮ ತುರ್ತು ಕಾರ್ಯಗಳಿಗೆ ಬರುವ ಸಂದರ್ಭದಲ್ಲಿ ಅಗತ್ಯವಾಗಿ ಮಾಸ್ಕ್ ಧರಿಸಲೇಬೇಕು. ಸ್ಯಾನಿಟೈಸರ್ ಬಳಸಿಕೊಂಡು ಕೈಗಳನ್ನು ಶುಚಿಗೊಳಿಸುತ್ತಿರಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಜನತೆ ಪಾಲಿಸಲೇಬೇಕೆಂದು ಅವರು ದೈಜಿವರ್ಲ್ಡ್ ವಾಹಿನಿ ಮೂಲಕ ವಿನಂತಿಸಿಕೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಗಳಲ್ಲಿ ಹಾಗೂ ಶಾಸಕರಲ್ಲಿ ಪಾಸಿಟಿವ್ ದೃಢಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಜಿಲ್ಲೆಯಲ್ಲಿ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇವರೆಲ್ಲರೂ ಕಾರ್ಯ ನಿರ್ವಹಿಸಿದವರು. ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸೋಂಕಿನಿಂದ ಮುಕ್ತಿಹೊಂದಲು ಇವರು ನಿರಂತರ ಹೋರಾಟ ನಡೆಸಿದ್ದಾರೆ. ತಮ್ಮ ಪ್ರಾಣಕ್ಕಿಂತ ಇತರರ ಪ್ರಾಣದ ಮೇಲಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಸೋಂಕು ತಗಲಿದ್ದು, ಬಹುತೇಕ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಜನತೆ ಭಯಭೀತರಾಗದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.