ಬೈಂದೂರು, ಜು. 03 (DaijiworldNews/MB) : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣದ ಪ್ರತಿಜ್ಞಾವಿಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಬೈಂದೂರು ಕ್ಷೇತ್ರದಲ್ಲಿ 43 ಕಡೆಗಳಲ್ಲಿ ಡಿಜಿಟಲ್ ರೂಪದಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಮಿಸ್ ಕಾಲ್ ಕೊಡುವುದರ ಮೂಲಕ ಬೈಂದೂರು ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಕಂಡು ಬಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಕಂಡು ಬಂದಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನೇರ ವೀಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಮತ್ತೆ ಮೊದಲಿನ ಗತ ವೈಭವಕ್ಕೆ ಮರಳಲಿದೆ. ಕಾರ್ಯಕರ್ತರು ಇನ್ನಷ್ಟು ಹುರುಪುಗೊಂಡಿದ್ದಾರೆ. ಡಿಕೆ ಶಿವಕುಮಾರ್ ಪಕ್ಷವನ್ನು ಸಮರ್ಥವಾಗಿ ಮುನ್ನೆಡಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ವೀಕ್ಷಕರಾದ ದೇವಾನಂದ ಶೆಟ್ಟಿ, ಜಿ.ಪಂ.ಸದಸ್ಯೆ ಗೌರಿ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಪ್ರಕಾಶ್ಚಂದ್ರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ವಂಡ್ಸೆ ಬ್ಲಾಕ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ವೀಕ್ಷಕರು ಆಗಿರುವ ಎಸ್.ರಾಜು ಪೂಜಾರಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರನ್ನು ಬಡಿದೆಬ್ಬಿಸುವ ಕೆಲಸ ಇವತ್ತಿನಿಂದ ಆಗಿದೆ. ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಕಾರ್ಯಕರ್ತರ ಜವಾಬ್ದಾರಿ ಇನ್ನಷ್ಟು ಹೆಚ್ಚಲಿದೆ. ಕಾಂಗ್ರೆಸ್ ಪಕ್ಷ ಮೊದಲಿನಿಂದ ಜನಸಾಮಾನ್ಯರ ಪಕ್ಷ. ಜನಸಾಮಾನ್ಯರ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದೆ. ಮುಂದೆ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿ ಪಕ್ಷ ಕೆಲಸ ಮಾಡಲಿದೆ ಎಂದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿ, ಇವತ್ತು ಹೊಸ ಚಿಗುರಿಗೆ ಒಗ್ಗಟ್ಟು ಮೂಡಿಸಿದೆ. ಹೊಸ ಚೇತನ, ಹುಮ್ಮಸ್ಸು ಎಲ್ಲರಲ್ಲಿಯೂ ಕಂಡು ಬರುತ್ತಿದೆ. ಪಕ್ಷಕ್ಕೆ ಸಮರ್ಥ ನಾಯಕ ಸಿಕ್ಕಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಕೆ.ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ಮುನ್ನೆಡೆಯಲಿದೆ ಎಂದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಲ್ಯಾಡಿ ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ತೆಕ್ಕಟ್ಟೆಯ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ವೀಕ್ಷಣೆ ಕಾರ್ಯಕ್ರಮ ನಡೆಯಿತು.