ಮಂಗಳೂರು, ಜು. 03 (DaijiworldNews/MB) : ವಿದ್ಯುತ್ ಸಂಬಂಧಿತ ಎಲ್ಲಾ ಮಾಹಿತಿ ಹಾಗೂ ಬಿಲ್ ಪಾವತಿಗಾಗಿ ಆ್ಯಪ್ ಒಂದನ್ನು ಬೆಸ್ಕಾಂ ಮಾದರಿಯಲ್ಲಿ ಮೆಸ್ಕಾಂನಲ್ಲೂ 2 ತಿಂಗಳುಗಳ ಒಳಗಾಗಿ ಜಾರಿಗೊಳಿಸಲಾಗುವುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ವಯರ್ಗಳಿಗೆ ಕವರ್ ಕಂಡಕ್ಟರ್ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ. ಡಿಜಿಟಲ್ ಮೀಟರ್ ಅಳವಡಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಮಳೆಗಾಳದಲ್ಲಿ ಉಂಟಾಗುವ ತುರ್ತು ಕೆಲಸಗಳನ್ನು ನಿಭಾಯಿಸಲು 851 ಸಿಬ್ಬಂದಿಗಳ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು ಈ ವಿಶೇಷ ಪಡೆಯಲ್ಲಿ ದ.ಕ.ದಲ್ಲಿ 234, ಉಡುಪಿಯಲ್ಲಿ 207, ಶಿವಮೊಗ್ಗದಲ್ಲಿ 225, ಚಿಕ್ಕಮಗಳೂರಿನಲ್ಲಿ 185 ಸಿಬ್ಬಂದಿಗಳು ಇದ್ದಾರೆ. 46 ವಾಹನಗಳನ್ನು ಕೂಡಾ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕೈಗಾರಿಕೆಗಳ ವಿದ್ಯುತ್ ಬೇಡಿಕೆ ಶೇ. 60ರಷ್ಟು ಕುಸಿದು, ಗೃಹಬಳಕೆಗೆ ಶೇ. 30ರಷ್ಟು ಏರಿಕೆಯಾಗಿತ್ತು. ಪ್ರಸ್ತುತ ಕೈಗಾರಿಕೆಗಳ ವಿದ್ಯುತ್ ಬೇಡಿಕೆ ಶೇ. 70ಕ್ಕೆ ಏರಿಕೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕಂದಾಯ ಶೇ. 50ರಷ್ಟು ಮಾತ್ರ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ವರ್ಷ ವಿದ್ಯುತ್ ಆಘಾತದಿಂದ 65 ವ್ಯಕ್ತಿಗಳು ಮೃತಪಟ್ಟಿದ್ದು 56.26 ಲಕ್ಷ ರೂ. ಪರಿಹಾರ ನೀಡಲಾಗಿದೆ. ಗಾಯಗೊಂಡ 33 ಮಂದಿಗೆ 0.75 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲೇ ಮಂಗಳೂರು ವಲಯದ ಮುಖ್ಯ ಎಂಜಿನಿಯರ್ ಮಂಜಪ್ಪ ಮಾತನಾಡಿ, ವಿದ್ಯುತ್ ಆಘಾತವಾಗದಂತೆ ತಡೆಯಲು ರೈತರು, ಗೃಹ ಬಳಕೆದಾರರು ಅರ್ಥ್ ಲೀಕೇಜ್ ಸರ್ಕಿಟ್ ಬ್ರೇಕರ್ ಅಳವಡಿಕೆ ಮಾಡಬೇಕು ಎಂದು ಹೇಳಿದ್ದಾರೆ.