ಮಂಗಳೂರು, ಜು. 03 (DaijiworldNews/MB) : ಟಿಪ್ಪರ್ ಚಾಲಕನೋರ್ವ ತನ್ನ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಘಟನೆ ಬಜಪೆ ಸಮೀಪದ ಅಂತೋಣಿಕಟ್ಟೆಯಲ್ಲಿ ನಡೆದಿದೆ.
ಮೃತ ಕಾವೂರು ನಿವಾಸಿ ಮಹಿಳೆಯನ್ನು ಶಾಂತಾ (30) ಎಂದು ಗುರುತಿಸಲಾಗಿದೆ.
ಹತ್ಯೆಗೈದ ವ್ಯಕ್ತಿ ಕಾವೂರಿನಲ್ಲಿ ಟಿಪ್ಪರ್ ಚಾಲಕನಾಗಿರುವ ಗಣೇಶ್ (40) ಮೂಲತಃ ಹಾಸನ ನಿವಾಸಿಯಾಗಿದ್ದು ಆತನ ಪತ್ನಿ ಶಾಂತಾ ಕಾಸರಗೋಡಿನ ಸಾಲೆತಡ್ಕ ನಿವಾಸಿಯಾಗಿದ್ದಾರೆ. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಇವರು ಇತ್ತೀಚೆಗೆ ಕಾವೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ.
ಪತಿ ಪತ್ನಿಯ ನಡುವೆ ವೈಮನಸ್ಸು ಉಂಟಾದ ಕಾರಣದಿಂದ ಪತ್ನಿ ಶಾಂತಾ ಮಕ್ಕಳನ್ನು ಕರೆದುಕೊಂಡು ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಪತಿ ಮಾತುಕತೆ ನಡೆಸಿ ಆಕೆಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದನು. ಜುಲೈ 1 ರ ಸಂಜೆ ಪತ್ನಿಯನ್ನು ವಾಪಾಸ್ ಕರೆದುಕೊಂಡು ಹೋದ ಪತಿ ವಾಪಾಸ್ ಕರೆದುಕೊಂಡು ಬಂದಿರದೇ ಜುಲೈ 2 ರಂದು ತನ್ನ ಮನೆಯಲ್ಲಿ ಮಕ್ಕಳೊಂದಿಗೆ ಇದ್ದ ಪತ್ನಿ ಶಾಂತಾ ಅವರ ತಾಯಿಗೆ ಕರೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಆ ಕೂಡಲೇ ಆತನ ಅತ್ತೆ ಕಾಪೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಪೊಲೀಸರು ಆರೋಪಿ ಗಣೇಶ್ ಕಲ್ಲು ಸಾಗಾಟ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕೋರೆಗೆ ಹೋಗಿದ್ದು ಶಾಂತಾ ಅವರ ಮೃತದೇಹ ಅಲ್ಲಿ ಪತ್ತೆಯಾಗಿದೆ.
ಆರೋಪಿ ಪತಿ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.