ಮಂಗಳೂರು, ಜು. 03 (DaijiworldNews/MB) : ಚೀನಾದ 59 ಆಪ್ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಸಕ, ಮಾಜಿ ಸಚಿವ ಯು ಟಿ ಖಾದರ್ ಅವರು, ''ಮೊದಲು ಪಿಎಂ ಕೇರ್ ಫಂಡ್ಗೆ ಟಿಕ್ಟಾಕ್ನಿಂದ ಬಂದಿರುವ 30 ಕೋಟಿ ಹಣವನ್ನು ಸರ್ಕಾರ ವಾಪಾಸ್ ನೀಡಲಿ. ಟಿಕ್ಟಾಕ್ನಿಂದ ಪಿಎಂ ಕೇರ್ಫಂಡ್ಗೆ ಹಣ ಪಡೆಯಲು ಸರ್ಕಾರಕ್ಕೆ ನಾಚಿಕೆಯಿಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಚೀನಾದ ಆಪ್ಗಳನ್ನು ಯಾತಾಕ್ಕಾಗಿ ಬ್ಯಾನ್ ಮಾಡಲಾಗಿದೆ? ಇದರಿಂದಾಗಿ ಚೀನಾ ದೇಶಕ್ಕೆ ಯಾವುದೇ ನಷ್ಟ ಇಲ್ಲ. ಹಾಗೆಯೇ ಭಾರತಕ್ಕೂ ಈ ಆಪ್ ಬ್ಯಾನ್ನಿಂದ ಯಾವುದೇ ಲಾಭ ಇಲ್ಲ. ಚೀನಾದ ಆಪ್ನಿಂದ ಭಾರತೀಯರು ಆದಾಯ ಗಳಿಸುತ್ತಿದ್ದಾರೆ. ಚೀನಾದ ಆಪ್ನ ಕಂಪೆನಿಗಳಲ್ಲಿ ಭಾರತೀಯರು ಉದ್ಯೋಗದಲ್ಲಿದ್ದು ಆಪ್ ಬ್ಯಾನ್ನಿಂದಾಗಿ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಕೇಂದ್ರ ಸರ್ಕಾರ ಬರೀ ಪ್ರಚಾರಕ್ಕಾಗಿ ಆಪ್ ಬ್ಯಾನ್ ಮಾಡಿದ್ದು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾ ದೇಶದವರು ಭಾರತದ ನಿರ್ಧಾರ ನೋಡಿ ನಗೆಪಾಟಲಿ ಮಾಡುವಂತಾಗಿದೆ'' ಎಂದು ಟೀಕೆ ಮಾಡಿದರು.
ಇನ್ನು ಈ ಸಂದರ್ಭದಲ್ಲೇ ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ''ಅಮಾನವೀಯವಾಗಿ ನಡೆದುಕೊಂಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಆರೋಗ್ಯರ ಸಚಿವರ ಜಿಲ್ಲೆ ಅಂತಾ ರಿಯಾಯಿತಿ ಕೊಡಲಾಗಿದೆಯಾ'' ಎಂದು ಪ್ರಶ್ನಿಸಿ ''ಈ ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು'' ಎಂದು ಆಗ್ರಹಿಸಿದರು.
''ಮುಂದಿನ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಅಂಬುಲೆನ್ಸ್ ಸೇವೆ ಇಲ್ಲ. ಎಲ್ಲಾ ಧರ್ಮದವರಿಗೂ ಸರಿಯಾದ ಅಂತ್ಯಕ್ರಿಯೆ ಮಾಡಲು ಸರ್ಕಾರ ಸ್ಥಳ ಗುರುತಿಸಬೇಕು'' ಎಂದು ಒತ್ತಾಯಿಸಿದರು.