ಮಂಗಳೂರು, ಏ 09 : ಭಾರತೀಯ ಜನತಾ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಪಕ್ಷದ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಏ. 8 ರ ಭಾನುವಾರ ಸಂಜೆ 6.30ಕ್ಕೆ ಆರಂಭವಾದ ಸಭೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದಿದ್ದು ಅಂತಿಮವಾಗಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಸುಮಾರು 110 ಹೆಸರುಗಳ ಪಟ್ಟಿಯೊಡನೆ ರಾಜ್ಯ ನಾಯಕರು ದೆಹಲಿಗೆ ತೆರಳಿದ್ದರೂ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರ ಬಳಿ ಇದ್ದ ಸಂಘದ ಪ್ರಮುಖರು ಸಿದ್ಧಪಡಿಸಿದ ಪಟ್ಟಿಗಳ ನಡುವೆ ತಾಳೆ ಹಾಕಿ ಸಹಮತವಿದ್ದ ಹೆಸರುಗಳಿಗೆ ಮಾತ್ರ ಸಮಿತಿಯ ಹಸಿರು ನಿಶಾನೆ ತೋರಿದೆ. ಬಿಜೆಪಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಬೇರೆ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುವವರನ್ನು ಸ್ಥಳೀಯ ನಾಯಕರ ಸಮ್ಮತಿ ಪಡೆದೇ ಸೇರಿಸಿಕೊಳ್ಳಲಾಗಿದೆ.
ಕಾರ್ಕಳದಿಂದ ವಿ ಸುನೀಲ್ ಕುಮಾರ್, ಕುಂದಾಪುರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಳ್ಯದಿಂದ ಎಸ್ ಅಂಗಾರ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಇದೇ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ ರವಿ, ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಪಿ. ಯೋಗೇಶ್ವರ, ಎಂ. ಕೃಷ್ಣಪ್ಪ, ವಿ. ಸೋಮಣ್ಣ ಹಾಗೂ ರವಿವಾರವಷ್ಟೇ ಬಿಜೆಪಿಗೆ ಸೇರ್ಪಡೆ ಯಾದ ಮಾಲೀಕಯ್ಯ ಗುತ್ತೇದಾರ್ ಮೊದ ಲಾದವರ ಹೆಸರುಗಳು ಇದೆ.