ಉಡುಪಿ, ಜು. 03 (DaijiworldNews/MSP) : ಉಡುಪಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವಿದ್ಯಾಂಗ ಉಪ ನಿರ್ದೇಶಕರು, ಎಲ್ಲಾ ಶಿಕ್ಷಕ ಬಂಧುಗಳು, ವಿದ್ಯಾರ್ಥಿಗಳು, ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯವಾಗಿ ಸರ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆ ಘೋಷಣೆ ಮಾಡಿದಾಗ ಜಿಲ್ಲಾಡಳಿತದ ಮೇಲೆ ವಿಶ್ವಾಸವಿರಿಸಿ ಪರೀಕ್ಷೆಗೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರನ್ನು ಅಭಿನಂದಿಸಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದ್ದಾರೆ.
ಅವರು ಕುಂದಾಪುರ ಮತ್ತು ಬೈಂದೂರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದು, ಇದು ಪರೀಕ್ಷಾ ಕೇಂದ್ರದÀಲ್ಲಿ ಹರಡಿದ್ದಲ್ಲ ಎಂದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಭಾಗಿಯಾದ ಎಲ್ಲ ಶಿಕ್ಷಕರು ಕೊವೀಡ್ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಯಾರೇ ಆಗಲಿ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿದ್ದರೆ ಮಾತ್ರೆಗಳನ್ನು ತಗೆದುಕೊಳ್ಳಬೇಡಿ. ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಜೀವ ಅಮೂಲ್ಯ, ಮೊದಲು ಜೀವ ಉಳಿಸಿಕೊಳ್ಳಿ ಎಂದರು.
ಉಡುಪಿ ಜಿಲ್ಲೆಯಲ್ಲಿ ಇನ್ನೂ 160 ಮಂದಿ ಕೊರೊನಾ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಒಬ್ಬರು ಮಾತ್ರ ವೆಂಟಿಲೆಟರ್ ವ್ಯವಸ್ಥೆಯಲ್ಲಿದ್ದಾರೆ. ಎಲ್ಲರೂ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.