ಮಂಗಳೂರು, ಜು. 03 (DaijiworldNews/MB) : ತನ್ನ ನೂರ ನಲುವತ್ತನೇ ವರುಷದ ಸಂಭ್ರಮದಲ್ಲಿರುವ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಲೇ ಬಂದಿದೆ. ಪೂಜ್ಯ ಫಾದರ್ ಅಗಸ್ಟಸ್ ಮುಲ್ಲರ್ ಅವರಿಂದ ಸ್ಥಾಪನೆಗೊಂಡ ಫಾದರ್ ಮುಲ್ಲರ್ ಸೇವಾ ಸಂಸ್ಥೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಜನಮನ್ನಣೆಗಳಿಸಿದೆ. ಇದೀಗ ಆಸ್ಪತ್ರೆ ಹೊಸ ರೂಪ, ನವ ವಿನ್ಯಾಸದೊಂದಿಗೆ ನವೀಕರಣ ಇತ್ತೀಚೆಗೆ ನಡೆದು ಈಗ ಉಪಯೋಗಕ್ಕೆ ಲಭ್ಯವಾಗಿದ್ದು ಜುಲೈ 3 ಶುಕ್ರವಾರ ಬೆಳಿಗ್ಗೆ 9:30 ಕ್ಕೆ ಉದ್ಘಾಟನೆ ನಡೆಯಿತು.
ಇದೀಗ ಈ ಸಂಸ್ಥೆಯ ಕಿರೀಟಕ್ಕೆ ಇನ್ನೊಂದು ಗರಿ. ಈಗಿರುವ ತುರ್ತು ಚಿಕಿತ್ಸಾ ಮತ್ತು ಸ್ವಾಗತ ವಿಭಾಗಗಳು 1972ನೇ ಇಸವಿಯಲ್ಲಿ ನಿರ್ಮಾಣಗೊಂಡವುಗಳಾಗಿದ್ದು ಅವುಗಳ ನವೀಕರಣ ಇತ್ತೀಚೆಗೆ ನಡೆದು ಈಗ ಉಪಯೋಗಕ್ಕೆ ಲಭ್ಯ. ಸುಮಾರು ಐವತ್ತು ವರುಷಗಳ ಕಾಲ ಫಾದರ್ ಮುಲ್ಲರ್ ಸಂಸ್ಥೆಗಳ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದ ಈ ವಿಭಾಗಗಳ ನವೀಕರಣ ಅತೀ ಅಗತ್ಯ ವೆನಿಸಿತ್ತು. ಹೊರ ರೋಗಿಗಳ ಸ್ವಾಗತ, ನಿರೀಕ್ಷಾ ಸ್ಥಳ, ನೋಂದಣಿ, ದಾಖಲಾತಿ, ಬಿಲ್ಲಿಂಗ್, ವೈದ್ಯಕೀಯ ದಾಖಲೆ, ಪರೀಕ್ಷಾ ನಮೂನೆ ಸಂಗ್ರಹ, ಸ್ಕ್ಯಾನಿಂಗ್ ಮತ್ತು ತುರ್ತು ಚಿಕಿತ್ಸಾ ವಿಭಾಗಗಳನ್ನು ನವೀಕರಿಸಿ ಸುಸಜ್ಜಿತ ಗೊಳಿಸಲಾಗಿದೆ.
ಸ್ಥಳಾವಕಾಶ ಹೆಚ್ಚಿಸುವಲ್ಲಿ, ಹೆಚ್ಚು ಅನುಕೂಲ ಒದಗಿಸುವಲ್ಲಿ ಮತ್ತು ಅಂದವನ್ನು ಹೆಚ್ಚಿಸುವಲ್ಲಿ ನವೀಕರಣ ಸಡೆದಿದೆ. ಕೌಂಟರ್ ಸಂಖ್ಯೆಯನ್ನು ಹೆಚ್ಚಿಸಿ, ಸೂಕ್ತ ವರ್ಗೀಕರಣ ಮಾಡಿರುವುದರಿಂದ ಆಸ್ಪತ್ರೆಗೆ ಬಂದವರು ಸರತಿ ಸಾಲಿನಲ್ಲಿ ಕಾಯುವ ಪ್ರಮೇಯವೂ ಕಡಿಮೆಯಗಲಿದೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಲು ತುಂಬಾ ಅನುಕೂಲಕರವಾಗಿದೆ.
ಸಂಪೂರ್ಣ ಹವಾ ನಿಯಂತ್ರಿತವಾಗಿರುವ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ತುರ್ತು ಚಿಕಿತ್ಸಾ ವಿಭಾಗವು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದು ಇನ್ನಷ್ಟು ತ್ವರಿತ, ಗುಣಮಟ್ಟದ ಸೇವೆಯನ್ನು ನೀಡಲು ಉಪಯುಕ್ತವಾಗಲಿದೆ. ಮೂವತ್ತು ಹಾಸಿಗೆಗಳ ಅವಕಾಶ ಮತ್ತು ತುರ್ತು ಶಸ್ತ್ರಚಿಕಿತ್ಸಾ ಕೊಠಡಿ, ನಿರಂತರ ಆಮ್ಲಜನಕ ಅನಿಲ ಪೂರೈಕೆ ವ್ಯವಸ್ಥೆ, ಮತ್ತು ವೈದ್ಯರ ವಿಶ್ರಾಂತಿ ಕೊಠಡಿಗಳನ್ನು ಹೊಂದಿರುವ ತುರ್ತು ಚಿಕಿತ್ಸಾ ವಿಭಾಗವು ಆಧುನೀಕರಣಗೊಂಡು ಸೇವೆಗೆ ಸಜ್ಜಾಗಿದೆ.
ರೇಡಿಯೋಲಜಿ ವಿಭಾಗಕ್ಕೆ ಸಂಪೂರ್ಣ ಕಾಯಕಲ್ಪ ನೀಡಿ ಇನ್ನಷ್ಟು ಸುಸಜ್ಜಿತಗೊಳಿಸಿ, ಅತ್ತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುವಂತೆ ಪರಿವರ್ತಿಸಲಾಗಿದೆ. ಇದರೊಂದಿಗೆ ಉತ್ಕøಷ್ಟ ಉಪಕರಣಗಳನ್ನು ಸೇರ್ಪಡಿಸಿ, ಇನ್ನಷ್ಟು ಉತ್ತಮ ಸೇವೆ ಹಾಗೂ ಬಂದವರಿಗೆ ಉತ್ತಮ ಅನುಭವ ನೀಡುವಂತೆ ಉನ್ನತೀಕರಿಸಲಾಗಿದೆ.
ಪರೀಕ್ಷಾ ಪ್ರಯೋಗಾಲಯದ ನಮೂನೆ ಸಂಗ್ರಹ ಕೇಂದ್ರ ಈ ಬಾರಿ ಕಂಡ ಪರಿವರ್ತನೆ ಎದ್ದು ಕಾಣುವಂತಹುದು. ಸೌಕರ್ಯಗಳ ಅಭಿವೃದ್ಧಿ ಮತ್ತು ಅಂದ ಹೆಚ್ಚಿರುವ ಜತೆಗೆ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ ವ್ಯವಸ್ಥೆ ಇನ್ನಷ್ಟು ಉತ್ತಮಗೊಂಡಿದೆ.
ವೈದ್ಯಕೀಯ ಅಧೀಕ್ಷಕರ ಕಾರ್ಯಾಲಯ ನವೀಕರಣಗೊಂಡಿದ್ದು, ನಿರೀಕ್ಷಣಾ ಸ್ಥಳಾವಕಾಶ ಹೆಚ್ಚಿಸಲಾಗಿದೆ.
ಒಟ್ಟಿನಲ್ಲಿ, ಈಗಾಗಲೇ ನೀಡುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ಆಸ್ಪತ್ರೆಗೆ ಬರುವ ರೋಗಿಗಳ ಮತ್ತು ಸಂದರ್ಶಕರ ಮನಸ್ಸಿಗೆ ನೆಮ್ಮದಿ ಹಾಗೂ ಮುಖದಲ್ಲಿ ಮಂದಹಾಸ ತರುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜಿಯಿದು. ಈ ಕಾಯಕವು ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ಮಂದನಿಯ ಫಾದರ್ ರಿಚರ್ಡ್ ಎಲೊಶಿಯಸ್ ಕುವೆಲ್ಲೊ ಅವರ ದೂರದರ್ಶಿತ್ವವುಳ್ಳ ನಾಯಕತ್ವ, ಆಡಳಿತಾಧಿಕಾರಿಗಳಾದ ಫಾದರ್ ರುಡೊಲ್ಫ್, ಫಾದರ್ ಅಜಿತ್, ಸಹಾಯಕ ಆಡಳಿತಾಧಿಕಾರಿ ಫಾದರ್ ನೆಲ್ಸನ್ ಮತ್ತು ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರ ಶ್ರಮದಿಂದ ಸಾಧ್ಯವಾಗಿದೆ. ''ಗುಣಪಡಿಸು ಮತ್ತು ಸಾಂತ್ವನಗೊಳಿಸು'' ಎಂಬ ಧ್ಯೇಯವಾಕ್ಯದೊಂದಿಗೆ ಸೇವಾಮನೋಭಾವವನ್ನು ಮೈಗೂಡಿಸಿಕೊಂಡು, ಜನಸಾಮಾನ್ಯರ ಆಸ್ಪತ್ರೆಯಾಗಿರುವ ಫಾದರ್ ಮುಲ್ಲರ್ ಸಂಸ್ಥೆ ಆಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಕೈಗೆಟಕುವ ವೆಚ್ಚದಲ್ಲಿ ನೀಡುತ್ತ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೊಡುತ್ತಿರುವುದು ಸರ್ವವೇದ್ಯ ವಿಚಾರ. ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳು ಮಾನವ ಸಂಪನ್ಮೂಲ ಇಲಾಖೆಯ NAAC ಸಂಸ್ಥೆಯಿಂದ ಎ ಶ್ರೇಣಿಯಲ್ಲಿ ಅಂಗೀಕೃತಗೊಂಡಿದ್ದು, ಆಸ್ಪತ್ರೆಯು NABH ಮಾನ್ಯತೆಯನ್ನು ಹಾಗೂ ಪರೀಕ್ಷಾ ಪ್ರಯೋಗಾಲಯ NABL ಮಾನ್ಯತೆಯನ್ನು ಪಡೆದಿವೆ. ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡುವಲ್ಲಿ ಹಿಂದೆ ಬೀಳದೆ, ಉನ್ನತೀಕರಣವನ್ನು ಸಾಧಿಸುತ್ತಾ ಈ ಭಾಗದ ಅತ್ತ್ಯುತ್ತಮ ಆರೋಗ್ಯ ಸೇವಾ ಸಂಸ್ಥೆಯಾಗಿ ಮುನ್ನಡೆಯುತ್ತಿರುವುದು ತನ್ನ ಸಮರ್ಪಣಾ ಭಾವದಿಂದ ಎಂದರೆ ಅತಿಶಯೋಕ್ತಿಯಲ್ಲ. ಈ ಮೆಡಿಕಲ್ ಕಾಲೇಜು ಆಸ್ಪತ್ರೆ ಖಂಡಿತವಾಗಿಯೂ ಬಡವರಿಗೊಂದು ವರದಾನ ಉತ್ತಮ ಚಿಕಿತ್ಸೆ ಹಾಗೂ ಕಡಿಮೆ ದರದಲ್ಲಿ ಲಭ್ಯವಾಗಿದೆ.