ಕುಂದಾಪುರ, ಜು 03(DaijiworldNews/PY): ಕೊರೊನಾ ಆತಂಕ ವ್ಯಾಪಕವಾಗಿದ್ದರೂ ಕೂಡಾ ಎಸ್.ಎಸ್.ಎಲ್.ಸಿ ಪರೀಕ್ಷೆ ಸಾಂಗವಾಗಿ ಸಂಪನ್ನಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆ ಯಶಸ್ವಿಯಾಗಿ ನೆರವೇರಿದ ಬಗ್ಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಬರೆದಿದ್ದರೆ, ಅವರನ್ನು ಪರೀಕ್ಷೆಗೆ ಪೋಷಕರು ಅತ್ಯಂತ ಆತ್ಮವಿಶ್ವಾಸದಿಂದ ಸಜ್ಜುಗೊಳಿಸಿದ್ದಾರೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಹಾಗೂ ವಿವಿಧ ಇಲಾಖೆಗಳು ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುವುದರಲ್ಲಿ ಶ್ರಮಿಸಿವೆ.
ಜೂನ್ 25ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು ಉಡುಪಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿತ್ತು. ಜು.3 ಶುಕ್ರವಾರ ಹಿಂದಿ ಪರೀಕ್ಷೆ ಬರೆಯುವ ಮೂಲಕ ಆರು ಪರೀಕ್ಷೆ ಪೂರೈಸಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಯುದ್ಧಗೆದ್ದ ಸಂಭ್ರಮ ಪಟ್ಟಿದ್ದಾರೆ.
ಸರಕಾರದ ಆದೇಶದಂತೆ ಜಿಲ್ಲಾದ್ಯಂತ ಉತ್ತಮ ರೀತಿಯಲ್ಲಿ ಹತ್ತನೆ ತರಗತಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆದಿದೆ. ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ನಗರದ ದೊಡ್ಡ ಪರೀಕ್ಷಾ ಕೇಂದ್ರವಾಗಿರುವ ಜ್ಯೂನಿಯರ್ ಕಾಲೇಜು ಸಹಿತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಆಯಾಯ ಪರೀಕ್ಷಾ ಕೇಂದ್ರದಲ್ಲಿನ ಶಿಕ್ಷಕರು ಮಾಡಿದ್ದಾರೆ. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಜ್ಯೂನಿಯರ್ ಕಾಲೇಜು) ಪರೀಕ್ಷಾ ಕೇಂದ್ರದಲ್ಲಿನ ಸುವ್ಯವಸ್ಥೆ ಬಗ್ಗೆ ಉಡುಪಿ ಡಿಸಿ ಜಿ. ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಷಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊರೋನಾ ಹಿನ್ನೆಲೆ ಮುಂಜಾಗೃತೆಯ ಸಲುವಾಗಿ ಉತ್ತಮ ಕ್ರಮಕೈಗೊಂಡಿದ್ದರಿಂದ ಮಕ್ಕಳನ್ನು ಕಳಿಸಲು ಮುಂದಾದವು. ಶಿಕ್ಷಣ ಸಚಿವರು, ಜಿಲ್ಲಾಡಳಿತ ನೀಡಿದ ಧೈರ್ಯದಿಂದ ಕೊರೋನಾ ಭಯ ಇರಲಿಲ್ಲ. ಶಾಲೆ, ಕಾಲೇಜು ಮರು ಆರಂಭ ಎರಡು ತಿಂಗಳ ಬಳಿಕ ಆಗುವುದೇ ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಪೋಷಕರಾದ ಗಿರಿಧರ ಪ್ರಭು.
ಪರೀಕ್ಷಾ ಕೇಂದ್ರದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಪಾಸಿಟಿವ್ ಬಂದರೂ ಕೂಡ ಆರು ಪರೀಕ್ಷೆಗಳಿಗೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹತ್ತನೆ ತರಗತಿ ಪರೀಕ್ಷೆ ಯಶಸ್ವಿಯಾಗಿ ಮುಗಿಯಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ಆಶಾ ಕಾರ್ಯಕರ್ತೆಯರು, ಸ್ಕೌಟ್ ಆಂಡ್ ಗೈಡ್ಸ್ ಸ್ವಯಂ ಸೇವಕರ ಶ್ರಮಾದಾನ ಇಲ್ಲಿ ಗಮನಾರ್ಹ ವಿಚಾರ ಎಂದು ಶಿಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.