ಮಂಗಳೂರು, ಜು 03 (DaijiworldNews/SM): ದ.ಕ. ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ನಡುವೆ ಶುಕ್ರವಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ. ಇನ್ನು ಮುಂದಿನ ದಿನಗಳಲ್ಲಿ ಸೋಂಕು ಲಕ್ಷಣಗಳಿಲ್ಲದೆ ಪಾಸಿಟಿವ್ ಬಂದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಬಗ್ಗೆ ದೈಜಿವರ್ಲ್ಡ್ ಜತೆ ಮಾತನಾಡಿರುವ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ತಾಜುದ್ದೀನ್, ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಿದ್ಧತೆಗಳು ನಡೆಸಲಾಗಿದೆ. ಸದ್ಯದಲ್ಲೇ ದ.ಕ. ಜಿಲ್ಲೆಯಲ್ಲೂ ಮನೆಯಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಾ. ತಾಜುದ್ದೀನ್ ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಅಗತ್ಯವಿದ್ದವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ:
ಇನ್ನು ಅತ್ಯಂತ ಅಗತ್ಯವಿದ್ದವರಿಗೆ ಮಾತ್ರವೇ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮುಂದುವರೆಸಲು ಕ್ರಮಕೈಗೊಳ್ಳಲಾಗಿದೆ. ಇತರ ರೋಗಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಇದೆ. ರೋಗ ಲಕ್ಷಣಗಳಾದ ಶೀತ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳು ಇದ್ದಲ್ಲಿ, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅವರಿಗೆ ಎಂದಿನಂತೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಉಳಿದಂತೆ ಮನೆಯಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದಿದ್ದವರಿಗೆ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಯಾವ ರೀತಿ ಚಿಕಿತ್ಸೆ:
ಕೊರೊನಾ ಪಾಸಿಟಿವ್ ಆಗಿದ್ದುಕೊಂಡು, ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಅಂತಹವರಿಗೆ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಇದೆ. ಶೀಘ್ರದಲ್ಲೇ ದ.ಕ. ಜಿಲ್ಲೆಯಲ್ಲಿ ಈ ಚಿಕಿತ್ಸಾ ವಿಧಾನ ಜಾರಿಗೆ ಬರಲಿದೆ. ಮನೆಯಲ್ಲಿ ಚಿಕಿತ್ಸೆ ಪಡುಯುವ ಸಂದರ್ಭ ಕಡ್ಡಾಯವಾಗಿ ಪ್ರತ್ಯೇಕ ಕೊಠಡಿಬೇಕಾಗಿದ್ದು, ಅದಕ್ಕೆ ಹೊಂದಿಕೊಂಡಿರುವ ಶೌಚಾಲಯ ಕಡ್ಡಾಯವಾಗಿಬೇಕಾಗಿದೆ. ಸೋಂಕಿತರು ಬಳಸುತ್ತಿರು ಶೌಚಾಲಯ, ಹಾಗೂ ಯಾವುದೇ ವಸ್ತುಗಳನ್ನು ಮನೆಯ ಇತರ ಸದಸ್ಯರು ಬಳಸುವಂತಿಲ್ಲ.
ಈ ನಡುವೆ, ಪ್ರತ್ಯೇಕ ಕೊಠಡಿಗೆ ಇತರರು ಸಂಪರ್ಕಹೊಂದುವಂತಿಲ್ಲ. ಆಹಾರ ಹಾಗೂ ಜೌಷಧ ನೀಡುವುದಕ್ಕೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥೆ ನಡೆಸಲು ಸರಕಾರ ಹಾಗೂ ಇಲಾಖೆ ಸೂಚನೆ ನೀಡಲಿದ್ದು, ಅದರಂತೆ ಕ್ರಮಕೈಗೊಳ್ಳಬಹುದಾಗಿದೆ. ಅಲ್ಲದೆ, ಆ ವ್ಯಕ್ತಿಯ ಟೆಂಪರೇಚರ್ ಚೆಕ್ ಮಾಡಬೇಕಾದೆ. ರಕ್ತದ ಮಾದರಿ ಪರೀಕ್ಷೆ ಮಾಡಬೇಕಾಗುತ್ತದೆ. ಇವುಗಳನ್ನು ಸೋಂಕಿತರೇ ನಡೆಸಬೇಕಾಗಿದೆ. ಇನ್ನು ಸೋಂಕಿನ ಜೌಷಧಿಯನ್ನು ಸರಕಾರ ವಿತರಿಸುತ್ತದೆ. ಅಲ್ಲದೆ, ಈ ಪ್ರದೇಶವನ್ನು ಸೂಕ್ತ ನಿಗದಿಗೊಳಿಸಿದ ವ್ಯಕ್ತಿಗಳು ನಿಗಾವಹಿಸಿಕೊಳ್ಳಲಿದ್ದಾರೆ ಎಂದು ಡಾ. ತಾಜುದ್ದೀನ್ ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಕೇವಲ ಸೋಂಕಿನ ಲಕ್ಷಣರಹಿತ ಮತ್ತು ಬೇರೆ ರೋಗ ಲಕ್ಷಣಗಳು ಇರದವರಿಗೆ ಮಾತ್ರವೇ ಹೋಂ ಐಸೋಲೇಷನ್ ಗೆ ವ್ಯವಸ್ಥೆ.
ಕೋವಿಡ್ ಧೃಢಪಟ್ಟಿರುವ, 50 ವರ್ಷಕ್ಕಿಂತ ಕೆಳಗಿನವರಿಗೆ ಹೋಂ ಐಸೋಲೇಶನ್ ಮಾಡಬಹುದು.
ಹೋಂ ಐಸೋಲೆಶನ್ ನಲ್ಲಿರುವವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಹೋಂ ಐಸೋಲೇಷನ್ ಬಗ್ಗೆ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ ನಿರ್ಧರಿಸುತ್ತಾರೆ.
ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಪ್ರತಿನಿತ್ಯ ತಪಾಸಣೆ ನಡೆಸುತ್ತಾರೆ.
ಹೋಂ ಐಸೋಲೇಶನ್ ನಲ್ಲಿರುವ ವ್ಯಕ್ತಿಯ ಹತ್ತಿರ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಪಿಪಿಇ ಸೇರಿದಂತೆ ಅಗತ್ಯ ಸಲಕರಣೆಗಳು ಇರಬೇಕಾಗುತ್ತದೆ.
ಹೋಂ ಐಸೋಲೇಶನ್ ನಿಂದ ಬಿಡುಗಡೆ ಹೊಂದಲು ಪ್ರಸ್ತುತದಲ್ಲಿರುವ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಪ್ರೋಟೋಕಾಲ್ ಗಳನ್ನೇ ಅನ್ವಯಿಸಬೇಕು.
ಹೋಂ ಐಸೋಲೇಶನ್ ಕುರಿತಂತೆ ಕುಟುಂಬದ ಸದಸ್ಯರಿಗೆ, ನೆರೆಹೊರೆಯವರಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ಕಡ್ಡಾಯವಾಗಿ ನೀಡಲೇಬೇಕು
ಇನ್ನು ಸೋಂಕಿತನ ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ. ಮನೆಯವರಿಗೆ ಯಾವುದೇ ಕಾರಣಕ್ಕೂ ಹೊರಗಡೆ ತೆರಳುವುದಕ್ಕೆ ಅವಕಾಶ ಇರುವುದಿಲ್ಲ. ಅಗತ್ಯ ಸೇವೆಗಳಿಗೆ ಆರೋಗ್ಯ ಇಲಾಖೆ ಸ್ಥಳೀಯಾಡಳಿತ ವ್ಯವಸ್ಥೆ ಕೈಗೊಳ್ಳಲಿದೆ.